ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ, ಯುವಕ, ಯುವತಿಯರು ವಶಕ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ(ಬೆಂಗಳೂರು ಗ್ರಾ.):
ದೇವನಹಳ್ಳಿ ಸಮೀಪದ ಕನ್ನಮಂಗಲ ಗೇಟ್ ಬಳಿಯ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದೇವನಹಳ್ಳಿ ಪೊಲೀಸರು ದಾಳಿ ಮಾಡಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವಕ, ಯುವತಿಯರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತನಿಖೆ ಮುಂದುವರೆಸಿದ್ದಾರೆ.

- Advertisement - 

ಪೊಲೀಸರ ದಾಳಿ ನಂತರ ಈಶಾನ್ಯ ವಲಯ ಡಿಸಿಪಿ ವಿ.ಜೆ.ಸಜೀತ್ ಅವರು ಪ್ರತಿಕ್ರಿಯೆ ನೀಡಿ, ದೇವನಹಳ್ಳಿಯ ಕನ್ನಮಂಗಲ ಗೇಟ್ ಬಳಿಯ ಫಾರ್ಮ್​ ಹೌಸ್​ನಲ್ಲಿ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದೇವನಹಳ್ಳಿ ಪೊಲೀಸರು ಮುಂಜಾನೆ 5 ಗಂಟೆ ಸಮಯದಲ್ಲಿ ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬರ ಬರ್ತ್ ಡೇ ಸೆಲೆಬ್ರೇಷನ್​ಗಾಗಿ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

- Advertisement - 

ಇಡೀ ರಾತ್ರಿ ಮಾದಕ ವಸ್ತುಗಳನ್ನು ಬಳಕೆ ಮಾಡಿರುವುದು ಕಂಡುಬಂದಿದೆ. 24 ಯುವಕರು 7 ಯುವತಿಯರು ಸೇರಿದಂತೆ ಒಟ್ಟು 31 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ, ಅಲ್ಲದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್ ಸೇರಿದಂತೆ ಡ್ರಗ್ ಸೇವನೆ ಮಾಡುವವರು ಭಾಗವಹಿಸಿದ್ದರು. 31 ಜನರ ರಕ್ತ ಮತ್ತು ಮೂತ್ರದ ಸ್ಯಾಂಪಲ್ ಸಂಗ್ರಹಿಸಿ ಎಫ್​ಎಸ್​ಎಲ್ ವರದಿಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಪಾರ್ಟಿಯಲ್ಲಿ ಭಾಗವಹಿಸಿದ ಕೆಲವರಲ್ಲಿ ಅಲ್ಪ ಪ್ರಮಾಣದ ಕೊಕೇನ್ ಸೇರಿದಂತೆ ಮಾದಕ ವಸ್ತುಗಳು ಸಿಕ್ಕಿದ್ದು, ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

- Advertisement - 

ದೇವನಹಳ್ಳಿ ಎಸಿಪಿ ನವೀನ್ ನೇತೃತ್ವದ ಪೊಲೀಸ್ ತಂಡ ದಾಳಿ ಮಾಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದೆ.

 

Share This Article
error: Content is protected !!
";