ಅಲೆಮಾರಿಗಳಿಗೆ ಸರ್ಕಾರದ ಯೋಜನೆ ತಲುಪಿಸಿ-ಅಧ್ಯಕ್ಷೆ ಜಿ.ಪಲ್ಲವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲೆ ಇಲ್ಲದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿಗಳ ಬಗ್ಗೆ ಕಾಳಜಿ ವಹಿಸಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಲೆಮಾರಿಗಳು ದೇಶದ ಮೂಲನಿವಾಸಿಗಳು. ಭಾಷೆ, ಕೌಶಲ್ಯ, ಪರಂಪರೆ ಇದ್ದು, ಪಾರಂಪರಿಕ ವೃತ್ತಿಯಿಂದ ಜೀವನ ಮಾಡುತ್ತಿದ್ದಾರೆ. ಅಲೆಮಾರಿಗಳಿಗೆ ನೆಲೆ, ಶಿಕ್ಷಣ ಮೂಲಭೂತವಾಗಿ ಅಗತ್ಯವಾಗಿದೆ. ನಿಟ್ಟಿನಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಂತೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ, ಸರ್ಕಾರದ ಸೌಲಭ್ಯ, ಯೋಜನೆಗಳನ್ನು ಕಾಲಮಿತಿಯೊಳಗೆ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಸೂಚನೆ ನೀಡಿದರು.

ನಿವೇಶನ ರಹಿತರ ಪಟ್ಟಿ ತಯಾರಿಸಿ: ತಾಲ್ಲೂಕುವಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಕುಟುಂಬಗಳ ಸಂಖ್ಯೆಯ ಮಾಹಿತಿಯನ್ನು ಜಾತಿವಾರು ಪಟ್ಟಿ ಸಿದ್ದಪಡಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ತಾ.ಪಂ ಇಒಗಳು ಖುದ್ದುಪರಿಶೀಲನೆ ನಡೆಸಿ ನಿವೇಶನ ರಹಿತ ಅಲೆಮಾರಿಗಳ ಪಟ್ಟಿ ತಯಾರಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.  

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮಾತನಾಡಿ, 2011 ಜನಗಣತಿ  ಪ್ರಕಾರ ಜಿಲ್ಲೆಯಲ್ಲಿ 15,492 ಪರಿಶಿಷ್ಟ ಜಾತಿಯ ಅಲೆಮಾರಿಗಳು ಇದ್ದು,  ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರಚ, ಕೊರಮ, ಬುಡ್ಗ ಜಂಗಮ, ಸುಡುಗಾಡು ಸಿದ್ದರು, ಹಂದಿ ಜೋಗೀಸ್, ಶಿಳ್ಯಕ್ಯಾತಾಸ್ ಚೆನ್ನದಾಸರ್ ಇದ್ದಾರೆ. 251 ಜನರು ಪರಿಶಿಷ್ಟ ಪಂಗಡದ ಮೇದಾರ ಅಲೆಮಾರಿ ಜನಾಂಗದವರು ಇದ್ದಾರೆ ಎಂದು ತಿಳಿಸಿದ ಅವರು,

2021-22ನೇ ಸಾಲಿನ ವಸತಿ ಯೋಜನೆಯಡಿ ಅಲೆಮಾರಿ ಸಮುದಾಯದವರು ಮನೆ ನಿರ್ಮಾಣ ಮಾಡಿಕೊಳ್ಳಲು ಜಿಲ್ಲಾಮಟ್ಟದ ಅನುಷ್ಠಾನ ಸಮಿತಿಯಲ್ಲಿ ಪರಿಶಿಷ್ಟ ಜಾತಿಯ 83 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ 9 ಫಲಾನುಭವಿಗಳ ಮಾಹಿತಿಯನ್ನು ರಾಜೀವ್ ಗಾಂಧಿ ನಿಗಮದ ಲಾಗಿನ್ನಲ್ಲಿ ಒದಗಿಸಲಾಗಿದೆ. ಉಳಿದ 74 ಫಲಾನುಭಿಗಳ ಮಾಹಿತಿ ನಮೂದಿಸಲು ತಾಂತ್ರಿಕ ಸಮಸ್ಯೆಯಿಂದ ಸಾಧ್ಯವಾಗಿರುವುದಿಲ್ಲ. ಪರಿಶಿಷ್ಟ ಪಂಗಡದ 06 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ 03 ಫಲಾನುಭವಿಗಳ ಅರ್ಹತೆ ಇರುವುದಿಲ್ಲ ಎಂದು ತಿಳಿಸಿದರು.  
ಶೇ.10ರಷ್ಟು ಮೀಸಲಾತಿ: ಜಿಲ್ಲೆಯಲ್ಲಿರುವ ಎಲ್ಲಾ ಕ್ರೈಸ್ ವಸತಿ ಶಾಲೆ ಮತ್ತು ಆಶ್ರಮ ಶಾಲೆಯಲ್ಲಿ ಶೇ.10ರಷ್ಟು ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂಬ ನಿರ್ದೇಶನವಿದೆ. ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಲೆಮಾರಿ ಜನಾಂಗದ ಮಕ್ಕಳು ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಹೇಳಿದರು.

 ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮಾತನಾಡಿ, ಜಿಲ್ಲೆಯ ಕ್ರೈಸ್ ವಸತಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿಯ 43 ಹಾಗೂ ಹಿಂದುಳಿದ ವರ್ಗದ 513 ಅಲೆಮಾರಿ, ಅರೆಅಲೆಮಾರಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗುಳಿಯಬಾರದು. ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ವಿಶೇಷ ಅಂದೋಲನ ಹಮ್ಮಿಕೊಂಂಡು ಅಲೆಮಾರಿ ವಿದ್ಯಾರ್ಥಿಗಳು ವಸತಿ ಶಾಲೆಗೆ ಪ್ರವೇಶಾತಿ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,  ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಆನಂದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರು ಇದ್ದರು.

 

- Advertisement -  - Advertisement - 
Share This Article
error: Content is protected !!
";