ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಜಪ್ತಿಯಾಗಿದ್ದ ದ್ವಿಚಕ್ರ ವಾಹನ ಹಿಂಪಡೆಯಲು ಬಂದ ವ್ಯಕ್ತಿಯನ್ನ ಥಳಿಸಿ, ಹಲ್ಲೆಗೈದ ಆರೋಪದ ಮೇರೆಗೆ ವಿಜಯನಗರ ಸಂಚಾರ ಠಾಣೆಯ ಪಿಎಸ್ಐ ಶಾಂತರಾಮ್ ಹಾಗೂ ಸಿಬ್ಬಂದಿ ಸಿದ್ದಿಕಿ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ.
ದ್ವಿಚಕ್ರ ವಾಹನದ ಮಾಲೀಕ ಈಶ್ವರ್ ಗೆ ಪೊಲೀಸರು ಥಳಿಸಿದ್ದರಿಂದ ಇಬ್ಬರನ್ನೂ ಅಮಾನತುಗೊಳಿಸಿ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ. ಎನ್. ಅನುಚೇತ್ ಆದೇಶ ಹೊರಡಿಸಿದ್ದಾರೆ.
ಜಿ.ಟಿ ಮಾಲ್ ಬಳಿ ಮಾರ್ಚ್ 14ರಂದು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುವಾಗ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಈಶ್ವರ್ ಪಾನಮತ್ತರಾಗಿರುವುದು ಪತ್ತೆಯಾಗಿತ್ತು. ನ್ಯಾಯಾಲಯದಲ್ಲಿ ದಂಡ ಪಾವತಿಸಿದರೆ 10 ಸಾವಿರ ರೂ. ಆದರೆ ಸ್ಥಳದಲ್ಲಿಯೇ 3 ಸಾವಿರ ರೂ. ನೀಡಿದರೆ ಬಿಟ್ಟು ಕಳಿಸುತ್ತೇವೆ ಎಂದು ಪಿಎಸ್ಐ ಮತ್ತು ಸಿಬ್ಬಂದಿ ಹೇಳಿದ್ದರು ಎಂದು ಈಶ್ವರ್ ಆರೋಪಿಸಿದ್ದರು.
ಪೊಲೀಸರ ಸೂಚನೆಯಂತೆ ಮೂರು ಸಾವಿರ ರೂ.ಗಳನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಲು ಮುಂದಾದಾಗ ನಗದು ರೂಪದಲ್ಲಿಯೇ ನೀಡುವಂತೆ ಪೊಲೀಸರು ಒತ್ತಾಯಿಸಿದ್ದರು. ಇದರಿಂದಾಗಿ ತನ್ನ ಬಳಿ ನಗದು ಹಣವಿಲ್ಲ ತಾನು ನ್ಯಾಯಾಲಯದಲ್ಲಿಯೇ ದಂಡ ಪಾವತಿಸುವುದಾಗಿ ಹೇಳಿದ್ದೆ. ಈ ವೇಳೆ ಪೊಲೀಸರು ತನ್ನ ದ್ವಿಚಕ್ರ ವಾಹನ ಜಪ್ತಿ ಮಾಡಿ, ದಂಡದ ರಶೀದಿ ಕೊಟ್ಟು ಕಳುಹಿಸಿದ್ದರು ಎಂದು ಬೈಕ್ ಮಾಲೀಕ ತಿಳಿಸಿದ್ದಾರೆ.
ಮಾರನೇ ದಿನ ನ್ಯಾಯಾಲಯದಲ್ಲಿ ದಂಡದ ಹಣ ಹಾಗೂ ಇತರೆ ಸಂಚಾರ ಉಲ್ಲಂಘನೆಗಳ ದಂಡ ಸಹಿತ 13 ಸಾವಿರ ರೂ. ಪಾವತಿಸಿದ್ದ ಈಶ್ವರ್, ತಮ್ಮ ದ್ವಿಚಕ್ರ ವಾಹನ ಹಿಂಪಡೆಯಲು ವಿಜಯನಗರ ಸಂಚಾರ ಠಾಣೆ ಬಳಿ ಹೋಗಿದ್ದರು.
ಪಿಎಸ್ಐ ಶಾಂತರಾಮ್ ಹಾಗೂ ಸಿಬ್ಬಂದಿ ಸಿದ್ದಿಕಿ ಅವರು ಈಶ್ವರ್‌ನನ್ನು ನಿಂಧಿಸಿದಾಗ ಮಾತಿಗೆ ಮಾತು ಬೆಳೆದು ಈಶ್ವರ್‌ನನ್ನು ಠಾಣೆಯೊಳಗೆ ಕರೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪೊಲೀಸರು ಮಾಡಿದ ಹಲ್ಲೆಯಿಂದ ಈಶ್ವರ್ ಠಾಣೆಯಲ್ಲೇ ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ ಆಟೋ ಕರೆಸಿ ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಘಟನೆಯನ್ನು ಗಮನಿಸುತ್ತಿದ್ದ ಸಾರ್ವಜನಿಕರು ಪೊಲೀಸರನ್ನು ತರಾಟೆ ತೆಗೆದುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಳಿಕ ಈ ಘಟನೆಯ ಕುರಿತು ಪ್ರಾಥಮಿಕ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಎಸಿಪಿಯವರಿಗೆ ಡಿಸಿಪಿ ಸೂಚನೆ ನೀಡಿದ್ದು ವರದಿ ಆಧರಿಸಿ ಪಿಎಸ್ಐ ಸೇರಿದಂತೆ ಇಬ್ಬರನ್ನೂ ಜಂಟಿ ಆಯುಕ್ತ ಅನುಚೇತ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.