ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಠಿಯಾಗಿದ್ದು ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ.
ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾಜಕಾಲುವೆಗಳು ತುಂಬಿ ಹರಿದ ಪರಿಣಾಮ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ.
ಶಾಂತಿ ನಗರದಲ್ಲಿರುವ ಸಿಸಿಬಿ ಕಚೇರಿಗೆ ಮಳೆ ನೀರು ನುಗ್ಗಿದೆ. ಕಚೇರಿಯ ಕೆಳ ಮಹಡಿಯಲ್ಲಿ ಮೊಣಕಾಲುವರೆಗೂ ನೀರು ನಿಂತಿದ್ದು, ಬೆಳಗ್ಗೆಯವರೆಗೂ ನೀರಿನ ಮಟ್ಟ ಕಡಿಮೆಯಾಗಿಲ್ಲ. ನೀರು ನುಗ್ಗಿರುವುದರಿಂದ ಕೆಲ ಕಡತಗಳು ಹಾನಿಗೊಳಗಾಗಿವೆ ಎನ್ನಲಾಗುತ್ತಿದ್ದು, ತನಿಖಾ ಕಾರ್ಯಾಚರಣೆಗೆ ತೊಂದರೆಯಾಗಿದೆ. ಅಧಿಕಾರಿಗಳು ಹಾನಿಯ ಕುರಿತು ಮೌಲ್ಯಮಾಪನ ಮಾಡುತ್ತಿದ್ದಾರೆ.
ಚಾಮರಾಜಪೇಟೆಯಲ್ಲಿ ಸಿಸಿಬಿ ಕಚೇರಿಯ ಹಳೆ ಕಟ್ಟದ ಶಿಥಿಲಾವಸ್ಥೆ ತಲುಪಿದ್ದರಿಂದ ಶಾಂತಿನಗರದಲ್ಲಿರುವ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಲಾಗಿತ್ತು. ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿದರೂ ಸಹ ಮಳೆ ಸಂದರ್ಭದಲ್ಲಿ ಸೂಕ್ತ ನಿರ್ವಹಣೆ ಸೌಲಭ್ಯ ಇಲ್ಲದಿರುವುದು ಕಚೇರಿ ಸಿಬ್ಬಂದಿಗೆ ಸಂಕಷ್ಟ ತಂದೊಡ್ಡಿದೆ.
ಮಳೆಗೆ ಮಹಿಳೆ ಬಲಿ: ನಿರಂತರ ಸುರಿಯುತ್ತಿರುವ ಮಳೆಗೆ ಕಾಂಪೌಂಡ್ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಮಹಾದೇವಪುರ ಠಾಣಾ ವ್ಯಾಪ್ತಿಯ ಚೆನ್ನಸಂದ್ರದಲ್ಲಿ ನಡೆದಿದೆ.
ಶಹಾಪುರ ಮೂಲದ ಶಶಿಕಲಾ (31) ಮೃತ ಮಹಿಳೆ. ಚೆನ್ನಸಂದ್ರದ ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಶಶಿಕಲಾ, ಎಂದಿನಂತೆ ಇಂದು ಬೆಳಿಗ್ಗೆ 7 ಗಂಟೆಗೆ ಕೆಲಸಕ್ಕೆ ಬಂದಿದ್ದರು. ಸ್ವಚ್ಚತಾ ಸಾಮಗ್ರಿಗಳನ್ನ ತೆಗೆದುಕೊಳ್ಳಲು ಹೋದಾಗ ಕಂಪನಿಯ ಕಾಂಪೌಂಡ್ ಶಶಿಕಲಾ ಅವರ ಮೇಲೆ ಕುಸಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಮಹಾದೇವಪುರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾತ್ರಿಯಿಡೀ ಸುರಿದ ಮಳೆಯಲ್ಲಿ ನೆನೆದಿದ್ದ ದೊಡ್ಡ ಕಾಂಪೌಂಡ್ ಏಕಾಏಕಿ ಕುಸಿದಿದ್ದರಿಂದ ಶಶಿಕಲಾ ಸಾವನ್ನಪ್ಪಿದ್ದಾರೆ. ಮೃತಳ ಪತಿ ಕೂಲಿ ಕೆಲಸ ಮಾಡಿಕೊಂಡಿದ್ದು, ಇಬ್ಬರು ಸಣ್ಣ ಮಕ್ಕಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆಗಳಿಗೆ ನುಗ್ಗಿದ ನೀರು:
ಭಾನುವಾರ ರಾತ್ರಿ ಸುರಿದ ಮಳೆಯಿಂದಾದಿ ವಸತಿ ಪ್ರದೇಶಗಳಲ್ಲಿ ಹೆಚ್ಚಿನ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೊರಮಾವು ಸುತ್ತಮುತ್ತ ಧಾರಾಕಾರ ವರ್ಷಧಾರೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.
ಹೊರಮಾವು ಬಳಿಯ ನೆಲ ಮಹಡಿಯ ಮನೆಗಳಿಗೆ ನೀರು ನುಗ್ಗಿ ಪೀಠೋಪಕರಣಗಳು ಮತ್ತು ಉಪಕರಣಗಳಿಗೆ ಹಾನಿಯಾಗಿದೆ. ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತ ಕಾರಣ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿತ್ತು. ಸಾರ್ವಜನಿಕ ಸಾರಿಗೆ ಸೇವೆಗಳಿಗೂ ಅಡಚಣೆ ಉಂಟಾಗಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು.
ಕಾವೇರಿನಗರ, ಸಂಪಂಗಿರಾಮನಗರದ ಮನೆಗಳಿಗೂ ಸಹ ಮಳೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಜಯನಗರ, ಬಿಟಿಎಂ ಲೇಔಟ್‌ನ ಹಲವೆಡೆ ಮರಗಳು ಧರೆಗುರುಳಿವೆ. ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರುಗಳಲ್ಲಿ ರಸ್ತೆಯಲ್ಲಿ ಮೊಣಕಾಲು ಮಟ್ಟದ ನೀರು ನಿಂತಿದ್ದು, ವಾಹನ ಸವಾರರ ಪರದಾಟಕ್ಕೆ ಕಾರಣವಾಗಿದೆ. ಸಿಲ್ಕ್ ಬೋರ್ಡ್ ರಸ್ತೆಯಲ್ಲಿ 5-6 ಕಿ.ಮೀ.ಗಳಷ್ಟು ಸಂಚಾರ ದಟ್ಟಣೆ ಉಂಟಾಗಿದ್ದು, ಟ್ರಾಫಿಕ್ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಹೈರಾಣಾಗಿದ್ದಾರೆ.
ಹಠಾತ್ ಮಳೆಯಿಂದ ನಗರದ ಒಳಚರಂಡಿ ಅವ್ಯವಸ್ಥೆ ಹಿನ್ನೆಲೆಯಲ್ಲಿ ಜನರು ಮೊಣಕಾಲು ಆಳದ ನೀರಿನಲ್ಲೇ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು. ಬೀದಿಗಳು ಹೊಳೆಗಳಂತೆ ಮಾರ್ಪಟ್ಟು, ಹಲವಾರು ವಾಹನಗಳು ಭಾಗಶಃ ಮುಳುಗಿಹೋಗಿದ್ದವು.
ದಿಗ್ಬಂಧನ: ಮಳೆಯಿಂದಾಗಿ ಯಲಹಂಕದ ಅಟ್ಟೂರಿನ ಇತಿಹಾಸ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯಕ್ಕೂ ಜಲ ದಿಗ್ಭಂದನ ಸೃಷ್ಟಿಯಾಗಿದೆ. ದೇವಸ್ಥಾನ ಕಲ್ಯಾಣಿ ತುಂಬಿ ಹರಿದು ದೇವಸ್ಥಾನದ ಅರ್ಧದಷ್ಟು ಭಾಗವು ಜಲಾವೃತವಾಗಿದೆ. ಸೋಮವಾರ ಬೆಳಿಗ್ಗೆ ಪೂಜೆಗೆಂದು ಬಂದ ಭಕ್ತರು ದೇವರ ದರ್ಶನ ಪಡೆಯಲು ತೊಂದರೆ ಅನುಭವಿಸುವಂತಾಯಿತು.