ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಸರ್ಕಾರ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸಮಯವನ್ನು ಬೆಳಗ್ಗೆ 8 ಗಂಟೆಯಿಂದ 1 ಗಂಟೆಯವರೆಗೆ ಮಾತ್ರ ಎಂದು ಬದಲಾಯಿಸಿದ್ದು ಈ ಕ್ರಮ ಅತ್ಯಂತ ಅಪ್ರಜಾತಾಂತ್ರಿಕವಾಗಿದ್ದು ಇದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಡ್ಡಿ ಎದುರಾಗುವುದರಲ್ಲಿ ಸಂಶಯವಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಮತ್ತು ಸರ್ಕಾರಿ ಶಾಲಾ ಮಕ್ಕಳ ನಡುವೆ ಭೀಕರ ತಾರತಮ್ಯ ಉಂಟಾಗುವ ಆತಂಕ ಎದುರಾಗಿದೆ.
ಈಗಾಗಲೇ ಶಾಲಾ ಶಿಕ್ಷಕರು ಭೋದನೆ ಮಾಡುವ ಜೊತೆಗೆ ಭೋದಕೇತರ ಚಟುವಟಿಕೆಗಳ ಜವಾಬ್ದಾರಿ ನಿರ್ವಹಿಸುವ ದುಸ್ಥಿತಿ ಇದ್ದು ಈ ಸಮೀಕ್ಷೆಯ ಜವಾಬ್ದಾರಿ ಹೊರೆಯಾಗಲಿದೆ ಎಂದು ಶಿಕ್ಷಕರಿಂದಲೂ ಕೇಳಿಬರುತ್ತಿದೆ.
ಅಲ್ಲದೇ ಈ ಕ್ರಮವು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಸ್ಥಿರತೆ ಮತ್ತು ದೈನಂದಿನ ದಿನಚರಿ ಹಾಳು ಮಾಡುತ್ತದೆ. ಬೋಧನೆ ಮತ್ತು ಕಲಿಕೆಯ ಶಾಲಾ ಪ್ರಮುಖ ಕಾರ್ಯಕ್ಕೆ ತೊಂದರೆಯಾಗದಂತೆ ಪೂರಕ ಯೋಜನೆಯಿಲ್ಲದೆ, ಚರ್ಚೆ ಮಾಡದೇ ಶಾಲಾ ಸಮಯ ಏಕಾಏಕಿ ಬದಲಾಯಿಸಿರುವುದು ಶೋಚನೀಯ ಸಂಗತಿಯಾಗಿದೆ. ಜೊತೆಗೆ ಸರ್ಕಾರಿ ಶಾಲಾ ಮಕ್ಕಳ ಫಲಿತಾಂಶ ಕುಸಿಯುವ ಭೀತಿ ಉಂಟಾಗಿದೆ. ಈ ಬಾರಿ ದಸರಾ ರಜೆ ಸೌಲಭ್ಯ ಪಡೆಯದ ಸರ್ಕಾರಿ ಶಾಲಾ ಶಿಕ್ಷಕರು, ಇದೀಗ ಒಂದೇ ದಿನ, ಬೋಧನೆ ಮತ್ತು ಸಮೀಕ್ಷೆ ಎರಡನ್ನೂ ನಡೆಸುವ ಹೊರೆ ಹೇರುವುದು ಸಮಂಜಸವಲ್ಲ.
ಸಮೀಕ್ಷೆಯ ಕೆಲಸಕ್ಕೆ ಸರ್ಕಾರಿ ಶಾಲಾ ಸಮಯ ಬಲಿಕೊಡದೆ ಮಕ್ಕಳ ಶೈಕ್ಷಣಿಕ ಭವಿಷ್ಯ ಹಿತದೃಷ್ಟಿಯಿಂದ ತನ್ನ ಆದೇಶ ಹಿಂಪಡೆದು, ಸಮೀಕ್ಷೆ ಕೆಲಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಎಐಡಿಎಸ್ಓ ಜಿಲ್ಲಾ ಸಂಚಾಲಕ ಕೆ.ಈರಣ್ಣ ಆಗ್ರಹಿಸಿದ್ದಾರೆ.

