ಒಳ ಮೀಸಲಾತಿ ಜಾರಿಗಾಗಿ ಪಾದಯಾತ್ರೆ ಆರಂಭಿಸಿರುವ ಷಡಾಕ್ಷರಮುನಿ ಸ್ವಾಮೀಜಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮಾದಿಗ ಸಮುದಾಯದ ನ್ಯಾಯಕ್ಕಾಗಿ ಕಳೆದ ೩೫ ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದ್ದರು ಇಲ್ಲಿಯವರೆಗೂ ಅಧಿಕಾರ ನಡೆಸಿದ ಎಲ್ಲಾ ಸರ್ಕಾರಗಳು ಅನ್ಯಾಯ ಮಾಡಿಕೊಂಡು ಬರುತ್ತಿವೆ ಎಂದು ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನ ಮಠದ ಷಡಾಕ್ಷರಮುನಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಹರಿಹರದ ಪ್ರೊ.ಬಿ.ಕೃಷ್ಣಪ್ಪ ಸಮಾಧಿಯ ಮೈತ್ರಿವನದಿಂದ ಮಾ.೧೨ ರಂದು ಆರಂಭಗೊಂಡ ಪಾದಯಾತ್ರೆ ಭಾನುವಾರ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದರು.

- Advertisement - 

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕವಾಗಿ ಮಾದಿಗ ಸಮುದಾಯ ತೊಂದರೆ ಅನುಭವಿಸಿಕೊಂಡು ಬರುತ್ತಿದೆ. ಅದಕ್ಕಾಗಿ ಮಾಹಿತಿ ಸಂಗ್ರಹಿಸುವುದಕ್ಕಾಗಿ ರಚಿಸಿರುವ ಎಲ್ಲಾ ಆಯೋಗಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂಬ ವರದಿ ನೀಡಿದ್ದರೂ ಆಳುವ ಸರ್ಕಾರಗಳಿಗೆ ಕಣ್ಣು, ಕಿವಿ ಇಲ್ಲದಂತಾಗಿರುವುದರಿಂದ ಮಾದಿಗರ ಬದುಕು ದಿವಾಳಿಯಾಗಿದೆ. ಹಾಗಾಗಿ ಒಳ ಮೀಸಲಾತಿಯನ್ನು ಅನುಷ್ಟಾನಕ್ಕೆ ತರಬೇಕೆಂದು ಒತ್ತಾಯಿಸುವುದಕ್ಕಾಗಿ ಮುನ್ನೂರು ಕಿ.ಮೀ.ಪಾದಯಾತ್ರೆ ನಡೆಸಿ ಮಾ.೨೬ ರಂದು ಬೆಂಗಳೂರು ತಲುಪಿ. ೨೭ ಕ್ಕೆ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮಾದಿಗರಿಗೆ ಬಡ್ತಿ ಮೀಸಲಾತಿ ಬೇಕು. ಮಾದಿಗರ ಅನ್ನ ಕಸಿದಿರುವ ಸರ್ಕಾರ ಈಗ ತಟ್ಟೆಯನ್ನು ಕಿತ್ತುಕೊಂಡಿದೆ. ಇದರ ವಿರುದ್ದ ನಮ್ಮ ಹೋರಾಟ ಎಂದರು.

- Advertisement - 

ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಮೋಹನ್‌ಕುಮಾರ್ ಮಾತನಾಡಿ ಮಾದಿಗರ ಬಗ್ಗೆ ಬದ್ದತೆ, ಕಾಳಜಿಯಿಟ್ಟುಕೊಂಡಿರುವ ಷಡಕ್ಷರಮುನಿ ಸ್ವಾಮಿಗಳು ಒಳ ಮೀಸಲಾತಿ ಜಾರಿಗಾಗಿ ಹರಿಹರದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದಾರೆ. ಮಾ.೧೨ ರಂದು ನಡೆಯಬೇಕಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದೂಡಿದ್ದಾರೆ.

ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತರಲೆಬೇಕು. ಯಾವುದೇ ಕಣ್ಣಾಮುಚ್ಚಾಲೆಯಾಟ ಆಡಬಾರದು. ಬಜೆಟ್‌ನಲ್ಲಿ ಮೀಸಲಿಟ್ಟಿರುವ ಎಸ್ಸಿಪಿ. ಟಿ.ಎಸ್ಪಿ. ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಲಾಗಿದೆ. ದಲಿತರ ಅಭಿವೃದ್ದಿಗಾಗಿಯೇ ಮೀಸಲಾಗಿರುವ ಹಣವನ್ನು ಅನ್ಯ ಉದ್ದೇಶಕ್ಕೆ ವಿನಿಯೋಗಿಸಬಾರದು. ಒಂದು ವೇಳೆ ಒಳ ಮೀಸಲಾತಿ ಜಾರಿಗೆ ತರದಿದ್ದರೆ ಷಡಕ್ಷರಮುನಿ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಬಿ.ಪಿ.ಪ್ರಕಾಶ್‌ಮೂರ್ತಿ, ಆರ್.ನರಸಿಂಹರಾಜು, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪರಶುರಾಮ್, ಕೆ.ಪಿ.ಶ್ರೀನಿವಾಸ್, ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ, ನಿವೃತ್ತ ಬಿಸಿಎಂ ಅಧಿಕಾರಿ ಜಗನ್ನಾಥ್, ಜಾನುಕೊಂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳ ಸ್ವಾಮಿ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Share This Article
error: Content is protected !!
";