ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಎಲ್ಲಾ ಖರ್ಚು ವೆಚ್ಚಗಳನ್ನು ಹೊರತುಪಡಿಸಿ ೮೯ ಲಕ್ಷ ೨ ಸಾವಿರದ ೧೪೦ ರೂ.ಗಳ ಲಾಭದಲ್ಲಿದೆ ಎಂದು ಸೊಸೈಟಿ ಅಧ್ಯಕ್ಷ ಶಿವಕುಮಾರ್ ಪಟೇಲ್ ತಿಳಿಸಿದರು.
ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ೨೪ ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಗಾಟಿಸಿ ಮಾತನಾಡಿದರು.
ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನದಂತೆ ಮುನ್ನಡೆಯುತ್ತಿರುವ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಾಭದ ಜೊತೆಗೆ ಸಾಲ ವಸೂಲಾತಿಯಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಮುಂದೆಯೂ ಲಾಭದಲ್ಲಿರಬೇಕಾದರೆ ಸರ್ವ ಸದಸ್ಯರುಗಳ ಸಹಕಾರ ಮುಖ್ಯ. ಬೆಳ್ಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಸುಸಜ್ಜಿತವಾದ ಸಮುದಾಯ ಭವನ ಕಟ್ಟಬೇಕಾಗಿರುವುದರಿಂದ ಸದಸ್ಯರುಗಳು ಈ ಸಾರಿ ಡಿವಿಡೆಂಡ್ ಫಂಡ್ ನೀಡಿ ಸಹಕರಿಸುವಂತೆ ಮನವಿ ಮಾಡಿದರು.
ಗೋಲ್ಡ್ ಲೋನ್ ಕೂಡ ಆರಂಭಿಸಿದ್ದೇವೆ. ಶೇ. ೯೮ ರಷ್ಟು ಸಾಲ ವಸೂಲಾತಿಯಾಗಿದೆ. ಅದರಂತೆ ಡೆವಿಡೆಂಟ್ ಜಾಸ್ತಿಯಾಗಿದೆ. ಐದು ವರ್ಷದಲ್ಲಿ ಮೂರು ಕೋಟಿ ರೂ.ಗಳ ಲಾಭದಲಿದ್ದು, ಸಾಲ ವಸೂಲಾತಿಯಲ್ಲಿ ಯಾವುದೇ ಬಾಕಿಯಿಲ್ಲ ಎಂದು ಸರ್ವ ಸದಸ್ಯರುಗಳ ಗಮನಕ್ಕೆ ತಂದರು.
೧೭೨೧ ಸದಸ್ಯರುಗಳಿದ್ದು, ೮೦ ಲಕ್ಷದ ಹದಿನೆಂಟು ಸಾವಿರದ ಆರು ನೂರು ರೂ. ಷೇರು ಬಂಡವಾಳವಿದೆ. ೧೨೦೦ ಖಾತೆಗಳು ವ್ಯವಹರಿಸುತ್ತಿಲ್ಲ. ಇದರಿಂದ ಓಟಿಂಗ್ ಪವರ್ ಕಳೆದುಕೊಳ್ಳುತ್ತೀರ. ತಲೆ ಎತ್ತಿ ನಡೆಯಬೇಕಾಗಿರುವುದರಿಂದ ಸೊಸೈಟಿಯಲ್ಲಿ ಉತ್ತಮ ವ್ಯವಹಾರವಿಟ್ಟುಕೊಳ್ಳಿ ಎಂದು ಷೇರುದಾರರಿಗೆ ಸೂಚಿಸಿದರು.
ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಜಿ.ಟಿ.ಸುರೇಶ್‌ಸಿದ್ದಾಪುರ ಮಾತನಾಡಿ ಐದು ವರ್ಷಗಳಲ್ಲಿ ಸೊಸೈಟಿ ಆರ್ಥಿಕವಾಗಿ ಸದೃಢವಾಗಿದೆ.
ಪ್ರಸ್ತುತ ೮೯ ಲಕ್ಷ ರೂ.ಗಳ ಲಾಭದಲ್ಲಿದ್ದು, ಮುಂದಿನ ವರ್ಷ ರಜತ ಮಹೋತ್ಸವ ಆಚರಿಸಲಾಗುವುದು. ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನ ಕಟ್ಟಲು ಸಂಕಲ್ಪ ತೊಟ್ಟಿದ್ದೇವೆ. ಸದಸ್ಯರುಗಳು ಒಕ್ಕೊರಲಿನಿಂದ ಸಹಕರಿಸಬೇಕೆಂದು ಕೋರಿದರು.
ಸೊಸೈಟಿ ನಿರ್ದೇಶಕರುಗಳಾದ ಎಸ್.ಪರಮೇಶ್ವರಪ್ಪ, ಎಸ್.ವಿ.ನಾಗರಾಜಪ್ಪ, ಎಸ್.ಷಣ್ಮುಖಪ್ಪ, ಡಿ.ಎಸ್.ಮಲ್ಲಿಕಾರ್ಜುನ್, ಬಿ.ಎಂ.ಕರಿಬಸವಯ್ಯ, ಸಿ.ಚಂದ್ರಪ್ಪ, ಜಯಶ್ರಿಆರ್.ಶೈಲಜಾ ಇವರುಗಳು ವೇದಿಕೆಯಲ್ಲಿದ್ದರು.
೨೦೨೪-೨೫ ನೇ ಸಾಲಿನಲ್ಲಿ ನಿಧನರಾದ ಹತ್ತು ಮಂದಿ ಸದಸ್ಯರುಗಳಿಗೆ ಮಹಾಸಭೆಯ ಆರಂಭದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕರಿಸಲಾಯಿತು.