ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೂಲ ಕಾಂಗ್ರೆಸ್ಸಿಗರಿಗೆ ಅಧಿಕಾರ ತಪ್ಪಿಸಿ, ಸಮಾವೇಶಗಳ ಮೂಲಕ ಏಕವ್ಯಕ್ತಿ ಪ್ರದರ್ಶನ ಮಾಡುತ್ತಿರುವ ಲಜ್ಜೆಗೆಟ್ಟ ಸಿದ್ದಹಸ್ತ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.
ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದ ಕುತಂತ್ರಿ. ಇನ್ನಿಲ್ಲದ ಷಡ್ಯಂತ್ರ, ಗುಂಪುಗಾರಿಕೆ ನಡೆಸಿ ರಾಜಕಾರಣದಿಂದ ಖರ್ಗೆಯವರನ್ನು ಬಲವಂತವಾಗಿ ದಿಲ್ಲಿ ರಾಜಕೀಯಕ್ಕೆ ತಳ್ಳಿದ ಪರಮ ಸ್ವಾರ್ಥಿ ಎಂದು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಅವರನ್ನು ಕೊರಟಗೆರೆ ಕ್ಷೇತ್ರದಲ್ಲಿ ಕುತಂತ್ರದಿಂದ ಸೋಲಿಸಿದ ಷಡ್ಯಂತ್ರಿ.
ಸಿಎಂ ರೇಸ್‌ನಲ್ಲಿದ್ದ ಡಾ.ಪರಮೇಶ್ವರ್‌ಅವರನ್ನು ಸ್ವಾರ್ಥಕ್ಕಾಗಿ ಸೋಲಿಸಿ ಮುಖ್ಯಮಂತ್ರಿ ಗಾದಿಗೇರಿದ ಕಪಟಿ. ಅಹಿಂದ ಹೆಸರಲ್ಲಿ ಪ್ರತಿಸ್ಪರ್ಧಿಗಳನ್ನು ಬಲಿ ಹಾಕಿದ ಸಿದ್ಧಸೂತ್ರದಾರ ಎಂದು ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಮನಬಂದಂತೆ ಟೀಕಿಸಿದೆ.
ಮೂಲ ಕಾಂಗ್ರೆಸ್ಸಿಗರಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಮೇಲಾಗಿ ಸಾಯುವ ತನಕ ಜತೆಯಲ್ಲಿರುವೆ ಎನ್ನುವ ಕನಕಪುರ ಬಂಡೆಗೂ ಹೆಜ್ಜೆಹೆಜ್ಜೆಗೂ ಅಧಿಕಾರ ತಪ್ಪಿಸುತ್ತಿರುವ ಸರ್ವಾಧಿಕಾರಿ! ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಒಂದೇ ಎರಡೇ.. ಹೆಸರಿಗೆ ಮಾತ್ರ ಅಹಿಂದಾ, ಅಧಿಕಾರ ಸೂತ್ರವೆಲ್ಲ ನನ್ನದೇ ಎನ್ನುವ ಢೋಂಗಿ ಸಮಾಜವಾದಿ ವೈಟ್ನರ್ ತೇಪೆಗಳಿಗೂ ಈಗ ರಂಧ್ರಗಳು ಬೀಳುತ್ತಿವೆ ಎಂದು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವ್ಯಂಗ್ಯವಾಡಿದೆ.