ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಚನ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಲು ಉತ್ಪಾದಕರಿಗೆ 9 ತಿಂಗಳಿಂದ ಪ್ರೋತ್ಸಾಹ ಧನವನ್ನು ನೀಡದೆ ರೈತ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಬೊಕ್ಕಸ ಬರಿದುಮಾಡಿಕೊಂಡಿರುವ “ಖಾಲಿ ಕೈ” ಸಿದ್ದರಾಮಯ್ಯ ಸರ್ಕಾರ, ರೈತರಿಗೆ ನೀಡಬೇಕಾದ 606.69 ಕೋಟಿಯಷ್ಟು ಕ್ಷೀರಧಾರೆಯ ಪ್ರೋತ್ಸಾಹದ ಹಣವನ್ನು ಬಾಕಿ ಉಳಿಸಿಕೊಂಡಿದೆ.
ಇದಕ್ಕೆ ಹಣಕಾಸಿನ ಕೊರತೆ ಕಾರಣವೆಂದು ಪಶುಸಂಗೋಪನಾ ಸಚಿವರೇ ವಿಧಾನಸಭೆ ಕಲಾಪದಲ್ಲಿ ತಿಳಿಸಿರುವುದು ಕಾಂಗ್ರೆಸ್‌ಸರ್ಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಟೀಕಿಸಿದೆ.
2023ರ ಚುನಾವಣೆಗೂ ಮುನ್ನ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಾಲಿನ ಪ್ರೋತ್ಸಾಹ ಧನವನ್ನು ಹೆಚ್ಚಿಸುವುದಾಗಿ ಪುಂಗಿ ಊದಿದ್ದ ಸಿದ್ದರಾಮಯ್ಯ ಈಗ ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕೆ 24*7 ರಾಜಕಾರಣ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಸುಮಾರು 38 ಲಕ್ಷ ಹೈನುಗಾರರಿದ್ದು, ಅವರಲ್ಲಿ ಶೇ 90ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಮಹಿಳಾ ಸಬಲೀಕರಣದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಸುಳ್ಳುರಾಮಯ್ಯ ಅವರೇ, ತಕ್ಷಣ ಬಾಕಿ ಉಳಿಸಿಕೊಂಡಿರುವ ರೈತರ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.