ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಥಾ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಣ ಮಾತುಗಳ ಮೂಲಕ ರಾಜ್ಯದ ಜನತೆಯ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮುಂದುವರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದರು.
‘ಅಭಿವೃದ್ಧಿ ಮತ್ತು ಗ್ಯಾರಂಟಿಗಳಿಗೆ ಸಮಾನ ಆದ್ಯತೆ‘ ಎನ್ನುವ ನಿಮ್ಮ ಮಾತು ಎಷ್ಟು ಸುಳ್ಳು ಎನ್ನುವುದನ್ನು ಕರ್ನಾಟಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಆರ್.ವಿ.ದೇಶಪಾಂಡೆ, ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿಯವರುಗಳೇ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳ ಅಬ್ಬರದಲ್ಲಿ ರಾಜ್ಯದ ಅಭಿವೃದ್ಧಿ ಹೇಗೆ ಕುಂಠಿತಗೊಂಡಿದೆ ಎಂಬ ಕಟು ಸತ್ಯವನ್ನು ಬಹುಮಂದಿ ಕಾಂಗ್ರೆಸ್ ಶಾಸಕರುಗಳು ಈಗಾಗಲೇ ಬಿಚ್ಚಿಟ್ಟಿದ್ದಾರೆ. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ‘ಅಭಿವೃದ್ಧಿಗೆ ಹಣವಿಲ್ಲ‘ ಎಂದು ಒಪ್ಪಿಕೊಂಡಿರುವಾಗ, ಮುಖ್ಯಮಂತ್ರಿಗಳು ಸುಳ್ಳು ಕಂತೆಗಳನ್ನು ಬಿಚ್ಚಿಡುವುದು ಹಾಸ್ಯಾಸ್ಪದ. ನಿಮ್ಮ ಸಾಲದ ಸಾಧನೆಗಳು, ಬಜೆಟ್ ನ ಸುಳ್ಳು ಭರವಸೆಗಳು ಈಗಾಗಲೇ ಜನರೆದುರು ಬಯಲಾಗಿದೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳು, ರಸ್ತೆ ಅಭಿವೃದ್ಧಿ, ಗ್ರಾಮೀಣ ಮೂಲಸೌಕರ್ಯಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳು ಇಂದು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದಕ್ಕೆ ಜನರು ತೀವ್ರ ಆಕ್ರೋಶಗೊಂಡಿದ್ದಾರೆ. ನಿಮ್ಮ ಸುಳ್ಳು ಭರವಸೆಗಳನ್ನು ನಿಮ್ಮ ಶಾಸಕರೇ ನಂಬುವುದಿಲ್ಲ, ಇನ್ನು ಜನರು ನಂಬುತ್ತಾರೆಯೇ? ಎಂದು ವಿಜಯೇಂದ್ರ ತೀಕ್ಷ್ಣವಾಗಿ ಪ್ರಶ್ನಿಸಿದರು.
ಬಾಗಲಕೋಟೆ ಮೆಡಿಕಲ್ ಕಾಲೇಜಿನ ಬಗ್ಗೆ ಮುಖ್ಯಮಂತ್ರಿಗಳ ಅಪ್ರಬುದ್ಧ ಮಾತುಗಳು ಹಾಸ್ಯಾಸ್ಪದ. 8 ವರ್ಷ ಮುಖ್ಯಮಂತ್ರಿಗಳಾಗಿದ್ದವರು, 17 ಬಜೆಟ್ ಮಂಡಿಸಿದ ತಾವು ಇಷ್ಟು ವರ್ಷ ಯಾಕೆ ಮಾಡಿಲ್ಲ ಎನ್ನುವುದನ್ನು ಮೊದಲು ಜನರಿಗೆ ಹೇಳಬೇಕು. ಹಿಂದಿನ ಬಿಜೆಪಿ ಅವಧಿಯಲ್ಲಿ ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರಿನಲ್ಲಿ ದಾಖಲೆ ಅವಧಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ್ದು ನಮ್ಮ ಪಕ್ಷದ ಸಾಧನೆ ಮಾತ್ರವಲ್ಲ, ಇದೇ ಘೋಷಿಸುವುದಕ್ಕೂ, ಪ್ರಾರಂಭಿಸುವುದಕ್ಕೂ ಇರುವ ವ್ಯತ್ಯಾಸ! ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ, ಜೀವ ರಕ್ಷಕ ಔಷಧಗಳ ಮತ್ತು ವೈದ್ಯರ ಕೊರತೆ ಹಾಗೂ ವೈದ್ಯರ ಬೇಡಿಕೆಗಳನ್ನು ನೀಗಿಸಲು ನಿಮಗೆ ಸಾಧ್ಯವಾಗಿಲ್ಲ. ಸಮುದಾಯ ಆರೋಗ್ಯ ಕೇಂದ್ರಗಳು ಮುಚ್ಚುವ ನಿಮ್ಮ ಸರ್ಕಾರದ ವಿರುದ್ಧ ನಿಮ್ಮ ಶಾಸಕರೇ ಪ್ರಸಕ್ತ ಅಧಿವೇಶನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೆಲ್ಲವನ್ನು ನೀವು ಮರೆಮಾಚಬಹುದು ಮುಖ್ಯಮಂತ್ರಿಗಳೇ, ಜನರು ಮರೆಯುವುದಿಲ್ಲ!
ರಾಜ್ಯದ ಖಜಾನೆಯನ್ನು ಬರಿದು ಮಾಡಿ, ಸಾಲದ ಸುಳಿಯಲ್ಲಿ ಸಿಲುಕಿಸಿರುವ ನಿಮ್ಮ ಸರ್ಕಾರದ ವೈಫಲ್ಯಗಳು, ಧರ್ಮ ಮತ್ತು ಜಾತಿಗಳ ನಡುವೆ ವಿಷಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ನಿಮ್ಮ ಎಲ್ಲಾ ಕುತಂತ್ರಗಳಿಗೆ ಜನರೇ ತೀರ್ಪು ನೀಡುವ ಕಾಲ ಸನ್ನಿಹಿತವಾಗಿದೆ! ಎಂದು ಅವರು ಎಚ್ಚರಿಸಿದರು.

