ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (1 ಮೇ 1932 – 10 ಡಿಸೆಂಬರ್ 2024) ಒಬ್ಬ ಭಾರತೀಯ ಸಜ್ಜನ ಹಸನ್ಮಖಿ ರಾಜಕಾರಣಿ.
ಎಸ್.ಎಂ ಕೃಷ್ಣ ಅವರು 1999 ರಿಂದ 2004 ರವರೆಗೆ ಕರ್ನಾಟಕದ 10 ನೇ ಮುಖ್ಯಮಂತ್ರಿ ಅತ್ಯುತ್ತಮ ಆಡಳಿತ ನೀಡಿದರು. ಅವರು 2009 ರಿಂದ ಅಕ್ಟೋಬರ್ 2012 ರವರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. 2004 ರಿಂದ 2008 ರವರೆಗೆ ಮಹಾರಾಷ್ಟ್ರದ 19ನೇ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರು ಡಿಸೆಂಬರ್ 1989 ರಿಂದ ಜನವರಿ 1993 ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಅವರು 1971 ರಿಂದ 2014 ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರೂ ಆಗಿದ್ದರು. 2023 ರಲ್ಲಿ, ಕೃಷ್ಣ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.
ಆರಂಭಿಕ ಜೀವನ ಮತ್ತು ಶಿಕ್ಷಣ-
ಎಸ್‌ಎಂ ಕೃಷ್ಣ ಅವರು ಎಸ್‌ಸಿ ಮಲ್ಲಯ್ಯ ಅವರ ಪುತ್ರರಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಂಬ ಗ್ರಾಮದಲ್ಲಿ ರೈತಾಪಿ ಒಕ್ಕಲಿಗ ಕುಟುಂಬದಲ್ಲಿ ಜನಿಸಿದರು.
ತಮ್ಮ ಪ್ರೌಢಶಾಲೆಯನ್ನು ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಮುಗಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್, ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜು(ಯೂನಿವರ್ಸಿಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೃಷ್ಣ ಅವರು ಅಧ್ಯಯನ ಮಾಡಿದರು, ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ DC ಯ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ ಕಾನೂನು ಶಾಲೆಯಲ್ಲಿ ಪದವಿ ಪಡೆದರು. ಅಲ್ಲಿ ಅವರು ಫುಲ್‌ಬ್ರೈಟ್ ವಿದ್ವಾಂಸರಾಗಿದ್ದರು. ಅವರು ಭಾರತಕ್ಕೆ ಮರಳಿದ ನಂತರ, ಅವರು 1962ರಲ್ಲಿ ಕರ್ನಾಟಕ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದರು.
ವೈಯಕ್ತಿಕ ಜೀವನ-
ಎಸ್.ಎಂ ಕೃಷ್ಣ ಅವರು ಪ್ರೇಮಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಮಗಳು ಮಾಳವಿಕಾ ಕೃಷ್ಣ ಅವರು ಉದ್ಯಮಿ ಮತ್ತು ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ.ಸಿದ್ಧಾರ್ಥ ಅವರನ್ನು ವಿವಾಹವಾದರು.
ತಮ್ಮ ರಾಜಕೀಯ ಜೀವನದ ಅರುಣೋದಯದಲ್ಲಿ ಅವರು ತಮ್ಮ ಜೀವನ ಚರಿತ್ರೆ “ಸ್ಮೃತಿವಾಹಿನಿ”ಯನ್ನು ಅನೇಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್‌ಕುಮಾರ್ ಅವರ ವೀರಪ್ಪನ್ ಅಪಹರಣ ಸೇರಿದಂತೆ ಹಲವು ಆಸಕ್ತಿದಾಯಕ ಘಟನೆಗಳನ್ನು ಆ ಕೃತಿಯಲ್ಲಿ ಬರೆದಿದ್ದಾರೆ.
ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಭಾರತದ ಮಾಜಿ ಪ್ರಧಾನಿ ಮತ್ತು ಜನತಾ ದಳ(ಜಾತ್ಯತೀತ) ರಾಷ್ಟ್ರೀಯ ಅಧ್ಯಕ್ಷ ಎಚ್‌ಡಿ ದೇವೇಗೌಡರು ಎರಡು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರುವ ಬಲವಾದ ಯೋಜನೆಗಳನ್ನು ಹೊಂದಿದ್ದರು ಎಂದು ಉಲ್ಲೇಖಿಸಿದ್ದಾರೆ. ಅವರು ತಮ್ಮ ಮನೆಯಲ್ಲಿ ದೀರ್ಘಕಾಲದ ಅನಾರೋಗ್ಯದ ಕಾರಣ 10 ಡಿಸೆಂಬರ್ 2024 ರಂದು ನಿಧನರಾದರು. ಅವರನ್ನು ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಒಕ್ಕಲಿಗ ಸಂಪ್ರದಾಯಗಳ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗುವುದು.
ರಾಜಕೀಯ ವೃತ್ತಿಜೀವನ-
ಕೃಷ್ಣ ಅವರು 1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರವನ್ನು ಸ್ವತಂತ್ರವಾಗಿ ಗೆಲ್ಲುವ ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. ಆ ಚುನಾವಣೆಯಲ್ಲಿ ಜವಾಹರಲಾಲ್ ನೆಹರು ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ರಾಜಕಾರಣಿ ಕೆ.ವಿ.ಶಂಕರೆಗೌಡ ಅವರ ಪರವಾಗಿ ಪ್ರಚಾರ ಮಾಡಿದ್ದರೂ ಶಂಕರೆಗೌಡರನ್ನು ಸೋಲಿಸಿದರು.
ನಂತರ ಕೃಷ್ಣ ಅವರು ಪ್ರಜಾ ಸೋಷಿಯಲಿಸ್ಟ್ ಪಕ್ಷ ಸೇರಿದರು. ಆದರೆ 1967 ರ ಚುನಾವಣೆಯಲ್ಲಿ ಮದ್ದೂರಿನಿಂದ ಕಾಂಗ್ರೆಸ್‌ನ ಎಂಎಂ ಗೌಡ ವಿರುದ್ಧ ಸೋತರು. 1968 ರಲ್ಲಿ ಹಾಲಿ ಸಂಸದರು ನಿಧನರಾದಾಗ ಅವರು ಮಂಡ್ಯ (ಲೋಕಸಭಾ ಕ್ಷೇತ್ರ) ಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿ ಸಂಸತ್ ಪ್ರವೇಶಿಸಿದರು.
1968 ರಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಪ್ರಜಾ ಸಮಾಜವಾದಿ ಪಕ್ಷದ ಸದಸ್ಯರ ನಡುವಿನ ಸಮನ್ವಯದಲ್ಲಿ ಪ್ರಭಾವಶಾಲಿಯಾಗಿದ್ದರು. ಅವರು 1968 ರ ಉಪಚುನಾವಣೆಯಿಂದ ಸಮಾಜವಾದಿಯಾಗಿ ಕರ್ನಾಟಕದ ಮಂಡ್ಯ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆ ಆಗುವ ಮೂಲಕ ಸಾಕಷ್ಟು ಸೇವೆ ಸಲ್ಲಿಸಿದರು.
ಮುಂದಿನ ಎರಡು ಅವಧಿಗಳಿಗೆ ಅಂದರೆ 1971 ಮತ್ತು 1980ರಲ್ಲಿ ಕಾಂಗ್ರೆಸ್ಸಿಗರಾಗಿ ಚುನಾವಣೆಯಲ್ಲಿ ಗೆದ್ದರು. ಮಂಡ್ಯ ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿಸುವಲ್ಲಿ ಅವರು ಬಹಳಷ್ಟು ಶ್ರಮಿಸಿದರು.
ನಂತರ ಅವರ ರಾಜಕೀಯ ಆಪ್ತರಾದ ನಾಯಕ ನಟ ಅಂಬರೀಶ್ ಮತ್ತು ಚಿತ್ರ ನಟಿ ದಿವ್ಯ ಸ್ಪಂದನ (ರಮ್ಯಾ) ಲೋಕಸಭೆಗೆ ಪ್ರತಿನಿಧಿಸಲು ಇವರ ಕಾರಣ ಆಗಿದ್ದಾರೆ. ಎಸ್.ಎಂ.ಕೃಷ್ಣ ಅವರು 1972 ರಲ್ಲಿ ಲೋಕಸಭೆಗೆ ರಾಜೀನಾಮೆ ನೀಡಿದರು ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದರು ಮತ್ತು ದೇವರಾಜ್ ಅರಸರಿಂದ ಸಚಿವರಾಗಿ ನೇಮಕಗೊಂಡರು.
ಎಸ್.ಎಂ ಕೃಷ್ಣ ಅವರು 1980ರಲ್ಲಿ ಲೋಕಸಭೆಗೆ ಹಿಂತಿರುಗಿದರು. ಅವರು 1983-84 ರ ನಡುವೆ ಇಂದಿರಾ ಗಾಂಧಿಯವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 1984ರ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸೋತರು ಮತ್ತು ಅವರು 1984 ಮತ್ತು 1985ರ ನಡುವೆ ರಾಜೀವ್ ಗಾಂಧಿಯವರ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
1985 ರಲ್ಲಿ ಕರ್ನಾಟಕ ವಿಧಾನಸಭೆಗೆ ಮರು ಆಯ್ಕೆಯಾದರು ಮತ್ತು 1989 ಮತ್ತು 1993 ರ ನಡುವೆ ಅವರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು 1993 ರಿಂದ 1994 ರವರೆಗೆ ಕರ್ನಾಟಕದ ಉಪಮುಖ್ಯಮಂತ್ರಿಯಾಗಿದ್ದರು.
ನಂತರ ಅವರು 1996 ಮತ್ತು 1999 ರಲ್ಲಿ ರಾಜ್ಯಸಭೆಯ ಸದಸ್ಯರಾದರು.
1999 ರಲ್ಲಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ಅವರು 1999ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದರು. ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2004ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲುವವರೆಗೂ ಸಿಎಂ ಹುದ್ದೆ ಹೊಂದಿದ್ದರು.
ESCOMS ಮತ್ತು ಭೂ ದಾಖಲೆಗಳ ಡಿಜಿಟಲೀಕರಣ (BHOOMI) ಮತ್ತು ಇತರ ಅನೇಕ ನಾಗರಿಕ ಸ್ನೇಹಿ ಉಪಕ್ರಮಗಳೊಂದಿಗೆ ವಿದ್ಯುತ್ ಸುಧಾರಣೆಗಳನ್ನು ಮಾಡುವಲ್ಲಿ ಎಸ್.ಎಂ ಕೃಷ್ಣ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಖಾಸಗಿ ಸಾರ್ವಜನಿಕ ಸಹಭಾಗಿತ್ವ ಪ್ರೋತ್ಸಾಹಿಸಿದರು ಮತ್ತು ಬೆಂಗಳೂರು ಅಡ್ವಾನ್ಸ್ ಟಾಸ್ಕ್ ಫೋರ್ಸ್ ಮುಂಚೂಣಿಯಲ್ಲಿದ್ದರು.
ಡಿಸೆಂಬರ್ 2004ರಲ್ಲಿ ಕೃಷ್ಣ ಅವರು ಮಹಾರಾಷ್ಟ್ರದ ಗವರ್ನರ್ ಆಗಿ ನೇಮಕಗೊಂಡರು. ಕೃಷ್ಣ 5 ಮಾರ್ಚ್ 2008 ರಂದು ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದರು. ಕರ್ನಾಟಕದಲ್ಲಿ ಸಕ್ರಿಯ ರಾಜಕೀಯಕ್ಕೆ ಮರಳುವ ಉದ್ದೇಶದಿಂದ ರಾಜೀನಾಮೆ ನೀಡಿದ್ದರು. ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಕೃಷ್ಣ ಅವರ ರಾಜೀನಾಮೆಯನ್ನು ಮಾರ್ಚ್ 6 ರಂದು ಅಂಗೀಕರಿಸಿದರು. ಮತ್ತೆ ಕೃಷ್ಣ ಅವರು ರಾಜ್ಯಸಭೆಗೆ ಪ್ರವೇಶಿಸಿದರು. 22 ಮೇ 2009ರಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಅಧಿಕಾರಾವಧಿಯಲ್ಲಿ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾಗ ಆರ್ಥಿಕ ಮತ್ತು ಶಕ್ತಿ ಸಂಬಂಧಗಳನ್ನು ಬಲಪಡಿಸಲು 2012ರಲ್ಲಿ ತಜಕಿಸ್ತಾನ್ ಸೇರಿದಂತೆ ದೇಶಗಳಿಗೆ ಭೇಟಿ ನೀಡಿದ್ದರು. ಕೃಷ್ಣ ಅವರು 26 ಅಕ್ಟೋಬರ್ 2012 ರಂದು ವಿದೇಶಾಂಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೃಷ್ಣ ಅವರು 2017 ಅವರು ಜನವರಿ 29 ರಂದು ಎಐಎಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. 2023ನೇ ಜನವರಿ 7ರಂದು ರಾಜಕೀಯ ನಿವೃತ್ತಿ ಘೋಷಿಸಿದರು.
ಕರ್ನಾಟಕದ ಮುಖ್ಯಮಂತ್ರಿ, ಕೇಂದ್ರ ಸರಕಾರದ ಹಣಕಾಸು-ವಿದೇಶಾಂಗ ಇಲಾಖೆ ಸಚಿವ, ಮಹಾರಾಷ್ಟ್ರದ ರಾಜ್ಯಪಾಲ ಹೀಗೆ ಹಲವಾರು ಮುಖ್ಯ ಪದವಿಗಳನ್ನು ಅಲಂಕರಿಸಿದ ರಾಜ್ಯದ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ತಮ್ಮ ಜೀವನ ಚರಿತ್ರೆಯಲ್ಲಿ ರಾಜ್ಯದ ರಾಜಕೀಯ ಇತಿಹಾಸ, ನೆನಪುಗಳನ್ನು ದಾಖಲಿಸಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ನೆನಪುಗಳ ಸಂಕಲನ ‘ಸ್ಮೃತಿವಾಹಿನಿ‘ಯಿಂದ ಆಯ್ದ ಕೆಲವು ಕುತೂಹಲಕರ ಭಾಗಗಳು-
ಎಸ್.ಎಂ.ಕೃಷ್ಣ ಅವರ ಜೀವನಚರಿತ್ರೆ ‘ಚಿತ್ರ ದೀಪ ಸಾಲು‘, ನೆನಪುಗಳ ಸಂಕಲನ ‘ಸ್ಮೃತಿವಾಹಿನಿ‘, ಜೀವನಚರಿತ್ರೆ ‘ಕೃಷ್ಣಪಥ‘, ಚಿಂತನೆಗಳ ಸಂಕಲನ ‘ಭವಿಷ್ಯದರ್ಶನ‘, ಇಂಗ್ಲಿಷ್‌ಕೃತಿಗಳಾದ ‘ಡೌನ್‌ಮೆಮೊರಿ ಲೇನ್‘ ಹಾಗೂ ‘ಸ್ಟೇಟ್ಸ್‌ಮನ್‌ಎಸ್‌ಎಂ ಕೃಷ್ಣ‘ ಕೃತಿಗಳು ಜನವರಿ 4, 2020ಕ್ಕೆ ಬೆಂಗಳೂರಿನ ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಿಡುಗಡೆಯಾಗಿದ್ದವು.
ಸಂಧಾನ ಚತುರ ಕೃಷ್ಣ
ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿದ್ದಲ್ಲದೆ ಐಟಿ, ಬಿಟಿ ಕಂಪನಿಗಳನ್ನು ಬೆಂಗಳೂರಿಗೆ ಕರೆ ತರುವಲ್ಲಿ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರು ವಹಿಸಿದ ಪಾತ್ರ ಅವಿಸ್ಮರಣೀಯ. ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದ ಪ್ರಗತಿಗೆ ಒತ್ತು ನೀಡಿದ್ದರು. ತಾಲೂಕು ಮಟ್ಟದಲ್ಲೂ ತಂತ್ರಜ್ಞಾನ ಬಳಸಿ ‘ಭೂಮಿ‘ ಎಂಬ ಹೆಸರಿನ ಯೋಜನೆಯಡಿ ಜಮೀನಿನ ಪತ್ರಗಳನ್ನು ಕಂಪ್ಯೂಟರ್ ಮೂಲಕ ನೀಡುವ ವ್ಯವಸ್ಥೆ ಜಾರಿಗೆ ತಂದು ದೇಶದಲ್ಲೇ ಹೆಸರು ಪಡೆದವರು ಎಸ್.ಎಂ ಕೃಷ್ಣ ಅವರು.
ಗಾಂಧಿ ಕುಟುಂಬದೊಂದಿಗೆ ಕೃಷ್ಣ
1967ರಲ್ಲಿ ಕಾಂಗ್ರೆಸ್ ಪಕ್ಷದ ಅಗ್ರ ನಾಯಕಿಯಾಗಿ ಇಂದಿರಾ ಗಾಂಧಿ ಹೊರ ಹೊಮ್ಮಿದ್ದರು. ಆದರೆ, ಲೋಕಸಭೆಯಲ್ಲಿ ಅತಂತ್ರ ಸ್ಥಿತಿ ಎದುರಾದಾಗ 1968ರವರೆಗೂ ಪ್ರಜಾ ಸೋಷಿಯಲಿಸ್ಟ್ ಪಕ್ಷ (ಪಿಎಸ್‌ಪಿ)ದಲ್ಲಿದ್ದ ಕೃಷ್ಣ ಇಂದಿರಾ ಬೆಂಬಲಕ್ಕೆ ನಿಂತರು.
ಸಮ್ಮಿಶ್ರ ಸರ್ಕಾರದಲ್ಲಿ 14 ಬ್ಯಾಂಕ್‌ಗಳ ರಾಷ್ಟ್ರೀಕರಣ, ಭೂ ಸುಧಾರಣೆ ಕಾಯ್ದೆಗೆ ಬೆಂಬಲ ಸೂಚಿಸಿದರು. ರಾಜಕೀಯದಲ್ಲಿ ಭದ್ರ ಬುನಾದಿ ಹಾಕಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಿ 1971ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಕೃಷ್ಣ ಅವರು ಸೇರ್ಪಡೆಯಾದರು.
1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ರಾಜಕೀಯ ಅಸ್ಥಿರತೆ ಉಂಟಾಗಿ ರಾಜೀವ್ ಗಾಂಧಿ ಕಾಂಗ್ರೆಸ್‌ನ ನೇತೃತ್ವ ವಹಿಸಿಕೊಂಡರು. ಆಗ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಕೃಷ್ಣ ಸೋತರು. ಮುಂದಿನ 5 ವರ್ಷಗಳ ಕಾಲ ಕೇವಲ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರು. 1989ರ ಹೊತ್ತಿಗೆ ವಿಧಾನಸಭೆ ಚುನಾವಣೆ ಎದುರಾಯಿತು. ಪಕ್ಷದ ಅಣತಿಯಂತೆ ಸ್ಪರ್ಧಿಸಿ ಗೆದ್ದು ಶಾಸಕರಾದರು. 1992ರವರೆಗೂ ವಿಧಾನಸಭೆಯ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದರು. 1992ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ಅವರ ವಿರುದ್ಧ ‘ಕ್ಲಾಸಿಕ್ ಕಂಪ್ಯೂಟರ್ ಹಗರಣ‘ ಕೇಳಿ ಬಂದಾಗ ಅವರ ಸ್ಥಾನದಲ್ಲಿ ಎಂ. ವೀರಪ್ಪ ಮೊಯ್ಲಿ ಅವರನ್ನು ಕೂರಿಸಲಾಯಿತು. ಆಗ ಕೃಷ್ಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಯೋಗ ಕೂಡಿ ಬಂದಿದ್ದರೂ ಪರಿಸ್ಥಿತಿ ಸರಿಯಾಗಿಲ್ಲದ್ದರಿಂದ ಅದರಿಂದ ಹಿಂದೆ ಸರಿಯಬೇಕಾಯಿತು.
ಎಸ್.ನಿಜಲಿಂಗಪ್ಪರೊಂದಿಗೆ ತಿಕ್ಕಾಟ
ವರ್ಣರಂಜಿತ ರಾಜಕಾರಣಿ ಎಸ್.ಎಂ. ಕೃಷ್ಣ ಅವರು ಪ್ರತಿಪಕ್ಷದವರನ್ನು ಟೀಕಿಸುವಾಗಲೂ ಹದ್ದು ಮೀರಿ ವರ್ತಿಸಿದವರಲ್ಲ. ವೈಯಕ್ತಿಕ ಟೀಕೆ, ಟಿಪ್ಪಣೆ ಮಾಡಿದವರಲ್ಲ. ಹಾಗಂತ ರಾಜಕೀಯ ತತ್ವ, ಸಿದ್ಧಾಂತಗಳಲ್ಲಿ ಎಂದೂ ರಾಜಿಯಾದವರೂ ಅಲ್ಲ. ಜನಪರ ಯೋಜನೆಗಳಲ್ಲಿ ಲೋಪ ಕಂಡು ಬಂದರೆ ಎಸ್. ನಿಜಲಿಂಗಪ್ಪ ಅವರೊಂದಿಗೆ ಸಾಕಷ್ಟು ಜಗಳ ಕೂಡ ಮಾಡಿಕೊಂಡಿದ್ದರು. ನಿಜಲಿಂಗಪ್ಪ ಅವರು ನನ್ನ ತಂದೆಗಿಂತಲೂ ಮಿಗಿಲಾದವರು. ರಾಜಕೀಯದಲ್ಲಿ ಅವರಿಂದ ಸಾಕಷ್ಟು ಕಲಿತಿದ್ದೇನೆ. ಆದರೆ, ನನ್ನ ಹಾಗೂ ಅವರ ಗುರಿಗಳು ವಿರುದ್ಧ ದಿಕ್ಕಿನಲ್ಲಿದ್ದವು ಎನ್ನುವುದನ್ನು ಹಿಂದೆ ಕೃಷ್ಣ ಅವರೇ ಹೇಳಿಕೊಂಡಿದ್ದರು. ನಿಜಲಿಂಗಪ್ಪ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಆಗ ಪ್ರತಿಪಕ್ಷ ಸ್ಥಾನದಲ್ಲಿ ಎಸ್. ಶಿವಪ್ಪ ಇದ್ದರು. ಸದನದಲ್ಲಿದ್ದ ಕೃಷ್ಣ ಅವರು ಎದ್ದು ನಿಂತು, ಯಾರಿಗೂ ಯಾವ ಸ್ಥಾನವೂ ಶಾಶ್ವತವಲ್ಲ. ಅದಕ್ಕೆ ನಾನು, ನೀವೂ ಹೊರತಾಗಿಲ್ಲ. ಸ್ಥಾನಗಳು ಅದಲು ಬದಲಾಗುವುದು ಸಹಜ ಎಂದಾಗ, ನಿಜಲಿಂಗಪ್ಪ ಅವರು ಉತ್ತರಿಸುತ್ತ ನನ್ನ ಗೆಳೆಯ ಕೃಷ್ಣ ಹಗಲುಗನಸು ಕಾಣುವವ. ಅವನಿಗೆ ಒಳ್ಳೆಯದಾಗಲಿ ಎಂದು ಹರಿಸಿದ್ದರು! ಕಾಕತಾಳಿಯವೋ ಏನೋ ಮುಂದಿನ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿತ್ತು. 1972ರಲ್ಲಿ ಕೃಷ್ಣ ಅವರು ವಾಣಿಜ್ಯ ಇಲಾಖೆಯ ಹೊಣೆ ಹೊತ್ತಿದ್ದರು. ಅಷ್ಟೊತ್ತಿಗೆ ನಿಜಲಿಂಗಪ್ಪ ಅವರು ರಾಜಕೀಯದಿಂದ ನೇಪತ್ಯಕ್ಕೆ ಸರಿದಿದ್ದರು. 1977ರವರೆಗೂ ಕೃಷ್ಣ ವಾಣಿಜ್ಯ ಇಲಾಖೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದರು. ಆದರೆ, 1978ರ ವೇಳೆಗೆ ಕಾಂಗ್ರೆಸ್ ಇಬ್ಭಾಗವಾಗಿ ಪರಿಸ್ಥಿತಿ ಹದಗೆಟ್ಟಿದ್ದರಿಂದ ಆಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.
ಸೋಲು, ಗೆಲವಿನ ಸರದಾರರೇ
ಮದ್ದೂರು ಕ್ಷೇತ್ರದಿಂದ 1994ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಸೋತರು. ಎರಡು ವರ್ಷಗಳ ಅಂತರದಲ್ಲಿ ಅಂದರೆ 1996ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಹಿರಿಯರ ಮನೆ ಸೇರಿದರು. 1998ರ ಹೊತ್ತಿಗೆ ಸೋನಿಯಾ ಗಾಂಧಿ ಕಾಂಗ್ರೆಸ್ ನೇತೃತ್ವ ವಹಿಸಿಕೊಂಡರು. ಕೃಷ್ಣ ಅವರ ರಾಜಕೀಯ ಮುತ್ಸದ್ಧಿತನ, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಮನೋಭಾವನೆ ಅರಿತ ಸೋನಿಯಾ 1999ರಲ್ಲಿ ಕೆಪಿಸಿಸಿ ಅಧ್ಯಕ್ಷ ಹೊಣೆಗಾರಿಕೆ ವಹಿಸಿದರು. ಕೃಷ್ಣ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆ ಎದುರಿಸಿ ಕಾಂಗ್ರೆಸ್ ಜಯ ಸಾಧಿಸಿತು. ಆಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಹುದ್ದೆಗೇರಿದರು. ಇದೇ ಸಂದರ್ಭದಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಳ್ಳಾರಿ ಹಾಗೂ ಅಮೇಥಿಯಲ್ಲಿ ಸ್ಪರ್ಧಿಸಿದ್ದ ಸೋನಿಯಾ ಎರಡೂ ಕಡೆ ಗೆಲವು ಸಾಧಿಸಿದ್ದು ಈಗ ಇತಿಹಾಸ.
ಕೃಷ್ಣ ಅವರು ಮುಖ್ಯಮಂತ್ರಿಯಾದ ಕಾಲದಲ್ಲಿ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದ ಪ್ರಗತಿಗೆ ಒತ್ತು ನೀಡಿದ್ದರಿಂದಾಗಿ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯಿತು. ಬೆಂಗಳೂರಿಗೆ ಐಟಿ, ಬಿಟಿ ಕಂಪನಿಗಳನ್ನು ಕರೆ ತರುವಲ್ಲಿ ಕೃಷ್ಣ ವಹಿಸಿದ ಪಾತ್ರ ಅವಿಸ್ಮರಣೀಯ. ತಾಲೂಕು ಮಟ್ಟದಲ್ಲೂ ತಂತ್ರಜ್ಞಾನ ಬಳಸಿ ‘ಭೂಮಿ‘ ಎಂಬ ಹೆಸರಿನ ಯೋಜನೆಯಡಿ ಜಮೀನಿನ ಪತ್ರಗಳನ್ನು ಕಂಪ್ಯೂಟರ್ ಮೂಲಕ ನೀಡುವ ವ್ಯವಸ್ಥೆ ಜಾರಿಗೆ ತಂದರು. ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದ್ದರು. ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರು 2001ರಲ್ಲಿ ಕಾರ್ಯನಿಮಿತ್ತ ಉತ್ತರ ಕನ್ನಡ ಜಿಲ್ಲೆಗೆ ತೆರಳಿದ್ದರು. ಸಂಜೆ 5 ಗಂಟೆ ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ಶಾಲೆ ಮುಗಿಸಿಕೊಂಡು ಕೆಲವು ಹೆಣ್ಣು ಮಕ್ಕಳು ನಡೆದುಕೊಂಡು ಹೋಗುತ್ತಿದ್ದರು. ಆಗ ಥಟ್ಟನೆ ಕಾರು ನಿಲ್ಲಿಸಿ ಆ ಮಕ್ಕಳ ಬಳಿ ತೆರಳಿದ ಕೃಷ್ಣ, ನೀವು ಬೆಳಗ್ಗೆ ಎಷ್ಟೊತ್ತಿಗೆ ಮನೆಯಿಂದ ಹೊರಡುತ್ತೀರಿ? ಎಂದು ಕೇಳಿದರು. ಅದಕ್ಕೆ ಮಕ್ಕಳು ಬೆಳಗ್ಗೆ 7 ಗಂಟೆಗೆ ಎಂದು ಉತ್ತರಿಸಿದರು. ಶಾಲೆ ಮುಗಿಸಿ ವಾಪಸ್ ಮನೆಗೆ ತಲುಪುವುದು ಯಾವಾಗ? ಎಂದು ಮರು ಪ್ರಶ್ನಿಸಿದಾಗ, ಮಕ್ಕಳು 6.30ರಿಂದ 7 ಗಂಟೆಯಾಗುತ್ತದೆ ಎಂದರು. ಆಗ ಹೌಹಾರಿದ ಕೃಷ್ಣ ಈ ಅವಧಿಯಲ್ಲಿ ಊಟಕ್ಕೇನು ಮಾಡುತ್ತೀರಿ? ಎಂದಾಗ ಮಕ್ಕಳ ಬಳಿ ಸಮರ್ಪಕ ಉತ್ತರವಿರಲಿಲ್ಲ.
ವಾಪಸ್ ಬೆಂಗಳೂರಿಗೆ ಬಂದ ಕೃಷ್ಣ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಲು ನಿರ್ಧರಿಸಿದರು. ಮೊದಲು 8 ಜಿಲ್ಲೆಗಳಲ್ಲಿ ಆರಂಭಿಸಿ ನಂತರ ರಾಜ್ಯಾದ್ಯಂತ ವಿಸ್ತರಿಸಿದರು. ಬಜೆಟ್‌ನಲ್ಲಿ ಪ್ರತಿವರ್ಷ 300 ಕೋಟಿ ಮೀಸಲಿರಿಸಿದರು.
ರಾಜ್ಯಪಾಲ, ವಿದೇಶಾಂಗ ಸಚಿವ
2004ರಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ಆಗ ಕೃಷ್ಣ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಿಸಲಾಯಿತು. ಸುಮಾರು 3 ವರ್ಷಗಳ ಕಾಲ ಮಹಾರಾಷ್ಟ್ರದ ರಾಜ್ಯಪಾಲರಾಗಿ ಮುಂಬೈನಲ್ಲಿ ನೆಲೆಸಿದ್ದರು. 2008ರ ವೇಳೆಗೆ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿದರೂ ಕಾಂಗ್ರೆಸ್‌ಗೆ ಅಧಿಕಾರ ಸಿಗಲಿಲ್ಲ. ಹೀಗಾಗಿ ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಕೃಷ್ಣ ಅವರ ಚಾಕಚಕ್ಯತೆ ಹಾಗೂ ರಾಜತಾಂತ್ರಿಕ ನೈಪುಣ್ಯತೆ ಅರಿತು 2009ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ನೇಮಿಸಲಾಯಿತು.
ಚೀನಾ, ಪಾಕ್ ಜತೆ ದೋಸ್ತಿ
ಭಾರತಕ್ಕೆ ಗಡಿ ಭಾಗದಲ್ಲಿರುವ ಚೀನಾ ಹಾಗೂ ಪಾಕ್‌ನ ಉಪಟಳ ನಿರಂತರವಾಗಿತ್ತು. ಇಂಥ ಕ್ಲಿಷ್ಟ ಪರಿಸ್ಥಿತಿಯನ್ನು ಕೃಷ್ಣ ಯಶಸ್ವಿಯಾಗಿ ನಿಭಾಯಿಸಿದರು. ಪಾಕ್ ಜತೆಗಿನ ಸಂಬಂಧ ಸುಧಾರಿಸಲು ಕೃಷ್ಣ ಅವರು ಇಸ್ಲಾಮಾಬಾದ್‌ಗೆ ತೆರಳಿ ಆಗ ಪಾಕ್ ವಿದೇಶಾಂದ ಸಚಿವರಾಗಿದ್ದ ಶಾ ಮೆಹಮೂದ್ ಖುರೇಷಿ ಜತೆ ಸುಮಾರು 8 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಕಾಶ್ಮೀರ ವಿಷಯದಲ್ಲಿ ಖುರೇಷಿ ಹಠ ಹಿಡಿದಿದ್ದಕ್ಕೆ ಕೃಷ್ಣ ಬರಿಗೈಯಲ್ಲಿ ವಾಪಸ್ ಆಗಿದ್ದರು. ಅದೇ ರೀತಿ ಚೀನಾ ಜತೆಯೂ ಸಮರ್ಪಕವಾದ ಮಾತುಕತೆ ನಡೆಸಿ ಸಂಬಂಧ ಸುಧಾರಿಸಲು ಕ್ರಮ ಕೈಗೊಂಡಿದ್ದರು. ಸಂಬಂಧ ಸುಧಾರಣೆ ನೆಪದಲ್ಲಿ ವಿದೇಶಗಳೆದುರು ಮಂಡಿಯೂರುವ ಅಥವಾ ಭಾರತಕ್ಕೆ ಧಕ್ಕೆಯಾಗುವ ಸಂದರ್ಭ ಎದುರಾದರೆ ಅದಕ್ಕೆ ಪ್ರತಿರೋಧ ಒಡ್ಡಿದ್ದು ಕೃಷ್ಣ ಅವರ ಚಾಕಚಕ್ಯತೆ ಹಾಗೂ ಧೈರ್ಯಕ್ಕೆ ಮೆಚ್ಚಬೇಕು.
ರಾಜಕೀಯ, ಕುಟುಂಬ, ಸುತ್ತಾಟ..!
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ಕಲರ್‌ಫುಲ್ ರಾಜಕಾರಣಿ! ನೀಟಾಗಿ ಡ್ರೆಸ್ ಮಾಡಿಕೊಳ್ಳುವ, ಮುಖದಲ್ಲೊಂದು ಕಿರು ನಗೆ ಬೀರುವ, ಕರಾರುವಕ್ಕಾಗಿ ಅಗತ್ಯಕ್ಕೆ ತಕ್ಕಷ್ಟು ಮಾತನಾಡುವ ಕೃಷ್ಣ, ಪ್ರತಿಪಕ್ಷದವರು ಎಷ್ಟೇ ಬಿರುಸಾಗಿ ಮಾತನಾಡಿದರೂ ಸಹನೆ ಕಳೆದುಕೊಂಡವರಲ್ಲ. ಇತರರಂತೆ ಅಂಗಿ ಪರಚಿ ಕೂಗಾಡಲಿಲ್ಲ. ಸಮಯಕ್ಕೆ ತಕ್ಕಂತೆ, ವಿಷಯಾಧಾರಿತವಾಗಿ ಮಾರುತ್ತರ ನೀಡುತ್ತಾ ಎದುರಾಳಿಗಳನ್ನು ಕಟ್ಟಿ ಹಾಕಿದ ಹೆಗ್ಗಳಿಕೆ ಅವರದು.
ಕೈ ಕೆಸರು ಮಾಡಿಕೊಳ್ಳದೆ ಸ್ವಚ್ಛ ರಾಜಕಾರಣ ಮಾಡುತ್ತ ಹಂತ ಹಂತವಾಗಿ ಮೇಲೆ ಬಂದವರು ಕೃಷ್ಣ. ಅವರ ಶ್ರಮ ಹಾಗೂ ಪಕ್ಷ ನಿಷ್ಠೆಗೆ ತಕ್ಕಂತೆ ಉನ್ನತ ಹುದ್ದೆಗಳೂ ಹುಡುಕಿಕೊಂಡು ಬಂದಿವು. ಅದಕ್ಕೆ ತಕ್ಕ ಜೀವ ತುಂಬುವಲ್ಲಿ ಕೃಷ್ಣ ಯಾವತ್ತೂ ಎಡವಿಲ್ಲ.
ಪ್ರೇಮಾ ಅವರ ಸೋದರ ಸಂಬಂಧಿಯೊಬ್ಬರು ಕೃಷ್ಣ ಅವರನ್ನು ಮದುವೆಯಾಗುವಂತೆ ಪ್ರಸ್ತಾಪಿಸಿದರು. ಪ್ರೇಮಾ ಹಾಗೂ ಅವರ ಕುಟುಂಬದವರು ಸಮ್ಮತಿಸಿ ಏ.19, 1964ರಲ್ಲಿ ಮದುವೆಯಾದರು.
ಎಷ್ಟೇ ಒತ್ತಡವಿದ್ದರೂ ಕೌಟುಂಬಿಕ ಜೀವನಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿದ್ದರು. ಪತ್ನಿ ಪ್ರೇಮಾ ಕೂಡ ಪತಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದ್ದಾರೆ.
ಕೃಷ್ಣ ಅವರಿಗೆ ಇಷ್ಟವಾಗಿದ್ದ ಅಂಶಗಳು-
ಎಸ್.ಎಂ.ಕೃಷ್ಣ ಅವರು ಕೇವಲ ರಾಜಕಾರಣಿ ಆಗಿರಲಿಲ್ಲ. ಅವರೊಬ್ಬ ಉತ್ತಮ ಕ್ರೀಡಾಪಟು, ಕೃಷ್ಣ ಒಬ್ಬ ಉತ್ತಮ ಟೆನಿಸ್ ಆಟಗಾರ ಆಗಿದ್ದರು. ಸಂಗೀತ ಪ್ರೇಮಿ. ರಿದಮಿಕ್ ಸೌಂಡ್ ಮತ್ತು ಟ್ಯೂನ್ಸ್‌ಗಳೆಂದರೆ ಪಂಚಪ್ರಾಣ. ಕ್ಲಾಸಿಕಲ್, ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಇಷ್ಟ. ಡಾ.ಎಂ. ಬಾಲಮುರಳಿಕೃಷ್ಣ, ಸುಧಾ ರಘುನಾಥನ್ ಅವರ ಸಂಗೀತಕ್ಕೆ ಮಾರು ಹೋಗಿದ್ದರು. ಯುರೋಪ್‌ನ ಬುದಾಪೆಸ್ಟ್ ಪ್ರದೇಶ ಎಂದರೆ ಕೃಷ್ಣ ಅವರಿಗೆ ತುಂಬಾ ಇಷ್ಟ.