ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ಯಾರಂಟಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕಣ್ಣು ಈಗ ನಾಡಿನ ಮಠ ಮಾನ್ಯಗಳ ಮೇಲೆ ಬಿದ್ದಿದೆ ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ ಕಾರಿದೆ.
ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸುವಂತೆ ಕೆಐಎಡಿಬಿ ನೋಟಿಸ್ ನೀಡಿದೆ.
ದೇವರಾಯಪಟ್ಟಣ ಕೆರೆಗೆ ನೀರು ಹರಿಸಿದ್ದಕ್ಕೆ, ಮಠವೇ ವಿದ್ಯುತ್ ಬಿಲ್ ಭರಿಸಬೇಕು ಎನ್ನುವುದು ಎಷ್ಟು ಸರಿ ? ಸಿದ್ದರಾಮಯ್ಯ ಸರ್ಕಾರದ ಈ ಲಜ್ಜೆಗೇಡಿ ನಡೆ ಖಂಡನೀಯ ಎಂದು ಜೆಡಿಎಸ್ ಖಂಡಿಸಿದೆ.
ನಾಡಿನ ಜನರ ಅನುಕೂಲಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವುದು ಸರ್ಕಾರದ ಜವಾಬ್ದಾರಿ ಎಂದು ಜೆಡಿಎಸ್ ತಾಕೀತು ಮಾಡಿದೆ.
ರಾಜ್ಯ ಸರ್ಕಾರ ದೇವರಾಯಪಟ್ಟಣ ಕೆರೆಗೆ ನೀರು ಹರಿಸಿದೆ. ಆದರೆ ಇದಕ್ಕೆ ವೆಚ್ಚವಾದ 70 ಲಕ್ಷ ರೂ. ವಿದ್ಯುತ್ ಬಿಲ್ ನ್ನು ತುಮಕೂರಿನ ಶ್ರೀ ಸಿದ್ದಗಂಗಾ ಮಠದಿಂದ ವಸೂಲಿ ಮಾಡಲು ಮುಂದಾಗಿದೆ. ಖಜಾನೆ ತುಂಬಿಸಿಕೊಳ್ಳಲು ಅಡ್ಡದಾರಿ ಹಿಡಿದಿರುವ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ, ಈಗ ನಾಡಿನ ಮಠ ಮಾನ್ಯಗಳ ಮೇಲೆ ನೆಟ್ಟಿದ್ದು, ಮಠಗಳ ಸಂಪತ್ತು ದೋಚಲು ಮುಂದಾಗಿದೆ.
ರಾಜ್ಯದ ಮಠಗಳು ಉಚಿತವಾಗಿ ಅನ್ನದಾಸೋಹ , ಶಿಕ್ಷಣ, ವಸತಿ ನೀಡುತ್ತಾ ಬಂದಿವೆ. ಆದರೆ ಸಿದ್ದರಾಮಯ್ಯ ಸರ್ಕಾರ ಮಠದಿಂದಲೇ ಕಿತ್ತುಕೊಳ್ಳುವ ಪರಿಸ್ಥಿತಿಗೆ ಬಂದಿರುವುದು ನಾಚಿಕೆಗೇಡು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.