ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೂರುದಾರರೊಬ್ಬರಿಂದ 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರಾಮಮೂರ್ತಿನಗರ ಠಾಣೆಯ ಇನ್ಸ್‌ಪೆಕ್ಟರ್ ರಾಜಶೇಖರ್, ಪಿಎಸ್ಐ ರುಮಾನ್ ಪಾಷಾ ಹಾಗೂ ಖಾಸಗಿ ವ್ಯಕ್ತಿ ಇಮ್ರಾನ್ ಬಾಬು ಎಂಬಾತನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ತಮಗೆ ತಿಳಿಸದೆ ತಮ್ಮ ಪತ್ನಿ ಆಭರಣ ಮತ್ತು ಹಣ ತೆಗೆದುಕೊಂಡಿರುವುದಾಗಿ ಆರೋಪಿಸಿದ್ದ ಗೋಪಿನಾಥ್ ಎಂಬವರು ಅವುಗಳನ್ನು ವಶಪಡಿಸಿಕೊಡುವಂತೆ ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದರು. ಆದರೆ ಪ್ರಕರಣದ ತನಿಖೆ ನಡೆಸಲು ಪೊಲೀಸರು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಗೋಪಿನಾಥ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಅದರ ಅನ್ವಯ ಲೋಕಾಯುಕ್ತದ ಬೆಂಗಳೂರು ನಗರ ವಿಭಾಗದ ಎಸ್.ಪಿ ಡಾ. ಕೆ.ವಂಶಿಕೃಷ್ಣ ಅವರ ಮಾರ್ಗದರ್ಶನಲ್ಲಿ ಲೋಕಾಯುಕ್ತರು ದಾಳಿ ಕಾರ್ಯಾಚರಣೆ ಕೈಗೊಂಡು, 1 ಲಕ್ಷ ರೂ ಸ್ವೀಕರಿಸುತ್ತಿದ್ದಾಗಲೇ ಮೂವರನ್ನೂ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

