ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ನಗರೀಕರಣ, ಕೈಗಾರಿಕರಣದ ಹೆಸರಿನಲ್ಲಿ ಅರಣ್ಯ ಸಂಪತ್ತು ನಾಶವಾಗುತ್ತಿದ್ದು . ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಸಂರಕ್ಷಣೆ ಕುರಿತು ವಿಶೇಷ ಕಾಳಜಿಯನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಜಿಡ್ಡಿಮನೆ ತಿಳಿಸಿದರು.
ಮೊಳಕಾಲ್ಮೂರು ತಾಲೂಕಿನ ಸುಲೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಕರ್ನಾಟಕ ಅರಣ್ಯ ಇಲಾಖೆ. ಮೊಳಕಾಲ್ಮೂರು ಪ್ರಾದೇಶಿಕ ವಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವನಮಹೋತ್ಸವ 2025ರ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ಸಂಪತ್ತು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು ಅಲ್ಲಿರುವ ಮರ ಗಿಡ ,ಸರಿಸೃಪಗಳು ಪ್ರಾಣಿಗಳು. ಪಕ್ಷಿಗಳು. ಕೀಟಗಳ ಬಗೆಗಿನ ವೈಜ್ಞಾನಿಕ ವಿಸ್ಮಯ ಹಾಗೂ ಪ್ರಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು.
ಮನುಷ್ಯನಿಗೆ ಸ್ವಚ್ಛವಾದ ಪ್ರಾಣ ವಾಯುವಿನ ಅಗತ್ಯವಿದ್ದು ಮಕ್ಕಳು ತಮ್ಮ ಪರಿಸರದಲ್ಲಿ ಸಸಿ ನೆಟ್ಟು ಬೆಳೆಸುವ ಗುಣವನ್ನು ಮೈಗೂಡಿಸಿಕೊಳ್ಳಿ ಎಂದರು.
ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯ ರಮೇಶ್ ಮಾತನಾಡಿ. ಪರಿಸರ ಸಂರಕ್ಷಣೆಗೆ ಅರಣ್ಯ ಇಲಾಖೆಯ ಜೊತೆಗೆ ಶೈಕ್ಷಣಿಕ ಸಂಸ್ಥೆಗಳು ಕೈಜೋಡಿಸಿದ್ದು, ಬೋಧನಾ ವಿಷಯಗಳಲ್ಲಿ ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆಗೆ ಬೇಕಾಗಿರುವ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದ್ದೇವೆ.
ಇದರಿಂದ ಮನುಷ್ಯನಿಗೆ ಬೇಕಾಗುವ ಪ್ರಾಣ ವಾಯು ಮರದಲ್ಲಿ ಅಡಗಿದೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಂಡಿರುವುದು ಸಂತಸದ ವಿಚಾರ ಎಂದರು.
ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆಗೆ ನಮ್ಮ ಶಾಲೆಯ ಸಿಬ್ಬಂದಿಗಳು ಕೈಜೋಡಿಸಿ ಆವರಣದಲ್ಲಿ ಸಸಿ ನೆಟ್ಟು ಬೆಳೆಸಿದ್ದೇವೆ. ಇದರಿಂದಾಗಿ ಶಾಲೆಗೆ ಹಸಿರೀಕರಣದ ಪ್ರಶಸ್ತಿ ಬಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸರಿ ಸೃಪಗಳಲ್ಲಿನ ವಿಧಗಳು ವಿಷದ ಆಧಾರದ ಮೇಲಿನ ಅವುಗಳ ವಿಂಗಡಣೆ .ಹಾವುಗಳು ಕಚ್ಚಿದ ಮೇಲೆ ಕೈಗೊಳ್ಳಬೇಕಾದ ಪ್ರಾಥಮಿಕ ಕ್ರಮಗಳು. ಆಹಾರ ಸರಪಳಿಯಲ್ಲಿ ಹಾವುಗಳ ಪಾತ್ರ. ಮನುಷ್ಯ ಜೀವನದಲ್ಲಿ ಹಾವುಗಳ ಉಪಯೋಗವೇನು ಹಾಗೂ ಅರಣ್ಯ ಸಂಪತ್ತಿನ ಜೊತೆಗೆ ಪ್ರಾಣಿ. ಪಕ್ಷಿ ಮತ್ತು ಉಭಯವಾಸಿಗಳ ಬಗ್ಗೆ ಪಿ.ಪಿ.ಟಿ. ಮೂಲಕ ಬೋಧಿಸಿ ಅರಿವು ಮೂಡಿಸಿದರು.
ಉಪವಲಯ ಅರಣ್ಯ ಅಧಿಕಾರಿ ತಿಪ್ಪೇಸ್ವಾಮಿ. ದಸ್ತು ಪಾಲಕ ಸಂತೋಷ್. ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.