ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅರ್ಕಾವತಿ ನದಿ ಹೋರಾಟ ಸಮಿತಿಯ ಹೋರಾಟಕ್ಕೆ ಸ್ಥಳೀಯ ಆಡಳಿತ, ಜಿಲ್ಲಾಡಳಿತ, ನಗರಸಭೆ ಹಾಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಹೋರಾಟವನ್ನು ತೀವ್ರ ಗೊಳಿಸುವ ನಿಟ್ಟಿನಲ್ಲಿ ಮಹಿಳಾ ಶಕ್ತಿ ಹೋರಾಟಕ್ಕೆ ಕೈ ಜೋಡಿಸುವುದಾಗಿ ಗ್ರಾ. ಪಂ. ಸದಸ್ಯೆ ಚೈತ್ರ ಭಾಸ್ಕರ್ ಹೇಳಿದರು.
ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ವತಿಯಿಂದ ನಡೆದ ಸುದ್ದಿ ಗೋಷ್ಠಿಯಲ್ಲಿ ಚೈತ್ರ ಭಾಸ್ಕರ್ ಮಾತನಾಡಿ ಮಜರಾ ಹೊಸಳ್ಳಿ ಹಾಗೂ ದೊಡ್ಡ ತುಮಕೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಗಳು ಭಾಷೆಟ್ಟಿಹಳ್ಳಿ ಕಾರ್ಖಾನೆಗಳ ಹಾಗೂ ನಗರಸಭೆಯ ತ್ಯಾಜ್ಯ ನೀರಿನಿಂದಾಗಿ ಕೆರೆಗಳ ನೀರು ಕಲುಷಿತ ಗೊಂಡಿದ್ದು ಈ ಬಗ್ಗೆ ಹೋರಾಟ ವೇದಿಕೆ ಸುಮಾರು ನಾಲ್ಕು ವರ್ಷಗಳಿಂದ ಹೋರಾಟ ನಡೆಸಿದೆ.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗಾಗಲೇ ಈ ಭಾಗದ ಕೆರೆಗಳ ಕಲುಷಿತ ನೀರಿನಿಂದಾಗಿ ಸ್ಥಳೀಯ ವಾಸಿಗಳು ಹಾಗೂ ಜಾನುವಾರುಗಳು ರೋಗ ರುಜಿನಗಳಿಂದ ಬಳಲುತ್ತಿವುದು ಎಲ್ಲರಿಗೂ ಗೊತ್ತಿರುವ ಸತ್ಯ.
ಶುದ್ಧ ಕುಡಿಯುವ ನೀರು ಸಿಗದಂತ ವಾತಾವರಣ ಸೃಷ್ಟಿಯಾಗಿದೆ. ಇಷ್ಟೆಲ್ಲ ಸಂಕಷ್ಟಗಳಿದ್ದರು ಸಹ ಮಾಲಿನ್ಯ ನಿಯಂತ್ರಣ ಮಂಡಳಿ, ಅಧಿಕಾರಿಗಳು, ಜನಪ್ರತಿನಿದಿನಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಸ್ಥಳೀಯ ಗ್ರಾಮಗಳ ಮಹಿಳೆಯರು ತೀವ್ರ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಚೈತ್ರ ಭಾಸ್ಕರ್ ಹೇಳಿದರು.
ಮಹಿಳಾ ಪ್ರಮುಖರಾದ ಸುಮಿತ್ರಾ ಮಾತನಾಡಿ ಮನೆಯಲ್ಲಿ ಬಳಸುವ ನೀರು ಸಂಪೂರ್ಣ ರಾಸಾಯನಿಕ ಅಂಶಗಳಿಂದ ಕೂಡಿದ್ದು ಗ್ರಾಮಸ್ಥರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಎಸ್. ಟಿ. ಪಿ. ಘಟಕಕ್ಕೆ ಬೇಡಿಕೆ ಇಟ್ಟರು ಪ್ರಯೋಜನವಾಗಿಲ್ಲ. ಹೀಗಾಗಿ ತೀವ್ರ ಹೋರಾಟ ನಡೆಸುವ ನಿಟ್ಟಿನಲ್ಲಿ ಮಹಿಳೆಯರು ಸಂಪೂರ್ಣ ಬೆಂಬಲ ಕೊಡುತ್ತಿದ್ದು, ಮುಂಬರುವ ದಿನಗಳಲ್ಲಿ ಜಾನುವಾರುಗಳ ಸಮೇತ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಹೋರಾಟ ವೇದಿಕೆಯ ಮುಖಂಡರಾದ ವಸಂತ್ ಹಾಗೂ ಸತೀಶ್ ಮಾತನಾಡಿ ಇದುವರೆಗಿನ ಹೋರಾಟಕ್ಕೆ ಯಾವುದೇ ಕಿಮ್ಮತ್ತು ಸಿಕ್ಕಿಲ್ಲ. ಹೀಗಾಗಿ ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮಹಿಳೆಯರು ಹೋರಾಟಕ್ಕೆ ಕೈ ಜೋಡಿಸಿದ್ದಾರೆ ಯಾವುದೇ ಕಾರಣಕ್ಕೂ ಸಮಸ್ಯೆ ಪರಿಹಾರ ಆಗುವವರೆಗೂ ಹೋರಾಟ ನಿಲ್ಲದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಿಮ್ಮಕ್ಕ, ಸುನೀತಾ, ಅನಿತಾ, ರೂಪ, ಸುಜಾತ, ಅಶ್ವತ್ತಮ್ಮ ನಾಗರತ್ನಮ್ಮ, ಸುಶೀಲಮ್ಮ, ವಿಜಯ್ ಕುಮಾರ್, ನಾರಾಯಣ್, ದೇವರಾಜ್, ಹರೀಶ್ ಮುಂತಾದವರು ಹಾಜರಿದ್ದರು.