ಮಹಿಳೆಯರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ- ಡಾ. ಜಿ.ಪರಮೇಶ್ವರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುದ್ದಗುಂಟೆಪಾಳ್ಯ‌ಘಟನೆಗೆ ಕುರಿತು ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು ಮಹಿಳೆಯರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಗೃಹಸಚಿವ ಡಾ. ಜಿ.ಪರಮೇಶ್ವರ್​ ಸ್ಪಷ್ಟನೆ ನೀಡಿದರು.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ನಾನು ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದೇನೆ. ನಿರ್ಭಯಾ ಯೋಜನೆ ಸೇರಿದಂತೆ ಮಹಿಳಾ ಸುರಕ್ಷತೆಗೆ ಅನೇಕ ಕಾರ್ಯಕ್ರಮ ನೀಡಿದ್ದೇನೆ. ನಾನು ಪ್ರತಿ ಬಾರಿ ಗೃಹ ಸಚಿವನಾದಾಗ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಮಹಿಳಾ ಸುರಕ್ಷತೆಗೆ ಏನೆಲ್ಲ ಕ್ರಮ ಕೈಗೊಂಡಿದ್ದೇನೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಪರಮೇಶ್ವರ್ ಹೇಳಿದರು.

ಒಂದು ಹೇಳಿಕೆ ತಿರುಚಿ, ನನ್ನ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ನಾನು ಮಹಿಳೆಯರ ರಕ್ಷಣೆಗೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇನೆ. ಮಹಿಳೆಯರ ರಕ್ಷಣೆ ಆಗಬೇಕು ಎನ್ನುವ ನಂಬಿಕೆಯಲ್ಲಿದ್ದೇನೆ. ಯಾರಿಗೇ ತೊಂದರೆ ಆದರೂ ಸಹ ನಮ್ಮ ಇಲಾಖೆಯಲ್ಲಿ ನೇರವಾಗಿ ಅನೇಕರನ್ನು ಹೊಣೆ ಮಾಡಿದ್ದೇನೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ನಾಡಿನ ತಾಯಂದಿರ ಮನಸ್ಸಿಗೆ ಈ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಹೇಳಿಕೆಯನ್ನು ಬೇರೆಬೇರೆ ರೂಪಕ್ಕೆ ತೆಗೆದುಕೊಂಡು ಹೋಗಬೇಕಿಲ್ಲ‌. ಪ್ರತಿನಿತ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಕಾನೂನು ಸುವ್ಯವಸ್ಥೆ ಎಡಿಜಿಪಿಯವರು ಇಲಾಖೆಯ ದೈನಂದಿನ ಮಾಹಿತಿ ನೀಡಲು ಬಂದಾಗ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸುತ್ತೇನೆ. ಜಿಲ್ಲಾ‌ಪೊಲೀಸ್ ಪ್ರಗತಿ ಪರಿಶೀಲನೆ ಸಭೆಯಲ್ಲೂ ಇದೇ ವಿಚಾರವನ್ನು ಪ್ರಸ್ತಾಪಿಸುತ್ತೇನೆ ಎಂದರು.

ಬೆಲೆ ಏರಿಕೆ ವಿರುದ್ಧ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವು ಬೆಲೆ ಜಾಸ್ತಿ ಮಾಡುತ್ತದೆ ಎಂಬುದು ಬಿಜೆಪಿಯವರಿಗೆ ಅರಿವಿಲ್ಲ. ಕೇಂದ್ರ ಸರ್ಕಾರದ ನೀತಿಗಳು ಹೇಗಿವೆ ಎಂಬುದು ಜನ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಡಾ.ಪರಮೇಶ್ವರ್ ತಿಳಿಸಿದರು.

 ಕೇಂದ್ರ ಸರ್ಕಾರ ಇಂದಿನಿಂದಲೇ ಜಾರಿಗೆ ಬರುವಂತೆ ಅಡುಗೆ ಸಿಲಿಂಡರ್ ಬೆಲೆ 50 ರೂ. ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಹೆಚ್ಚಳ ಮಾಡಿದೆ. ಇದಕ್ಕೆ ಮೊದಲು ಬಿಜೆಪಿಯವರು ಉತ್ತರಿಸಬೇಕು ಎಂದು ಗೃಹ ಸಚಿವರು ಆಗ್ರಹ ಮಾಡಿದರು. ಬಿಜೆಪಿಯವರು ಜನಾಕ್ರೋಶ ಅಂತ ಹೇಳಿದ್ದರು. ಬಿಜೆಪಿ ಆಕ್ರೋಶ ಎಂದು ನಾನು ಹೇಳಿದ್ದೆ. ಆಕ್ರೋಶ ಮಾಡಲು ಹೊರಟಿರುವ ಬಿಜೆಪಿಯವರು ಈಗ ಉತ್ತರ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ನನಗೆ ಬೇರೆಬೇರೆ ಕೆಲಸಗಳಿರುವುದರಿಂದ ಎಐಸಿಸಿ ಸಭೆಗೆ ಹೋಗಿಲ್ಲ. ಎಐಸಿಸಿ ಸಭೆಗಳಾದಾಗ ಸಂಘಟನೆ ಮತ್ತು ಬಲವರ್ಧನೆ ಕುರಿತಂತೆ ಅನೇಕ ಚರ್ಚೆ ಮತ್ತು ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಪಕ್ಷದ ಮುಂದಿನ ದೃಷ್ಟಿಕೋನದ ಬಗ್ಗೆ ಪ್ರಮುಖವಾದ ರೆಸಲೂಷನ್‌ಗಳನ್ನು ಮಾಡುತ್ತಾರೆ. ಪಕ್ಷ ಸಂಘಟನೆ ಕುರಿತಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ವರ್ಕಿಂಗ್ ಕಮಿಟಿ ಏನು ತೀರ್ಮಾನ ಕೈಗೊಳ್ಳುತ್ತಾರೆ. ಅದೆಲ್ಲವನ್ನು ನಾವು ಅನುಷ್ಠಾನಗೊಳಿಸಲು ಸಿದ್ಧರಿರುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

 

Share This Article
error: Content is protected !!
";