ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ 1.5 ಲಕ್ಷ ಕೋಟಿ ಮೀಸಲಿಟ್ಟು ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಸಾಫ್ಟ್ ವೇರ್ ಟೆಕ್ನಾಲಜೀ ಪಾರ್ಕ್ ಆಫ್ ಇಂಡಿಯಾ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ‘ಬೆಂಗಳೂರು ಟೆಕ್ ಸಮ್ಮಿಟ್’28 ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
41 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ, ಅವಳಿ ಸುರಂಗ, ಎಲಿವೇಟೆಡ್ ಕಾರಿಡಾರ್, ಬಫರ್ ರಸ್ತೆಗಳು ಸೇರಿದಂತೆ 117 ಕಿ.ಮೀ ಉದ್ಧದ ಬೆಂಗಳು ಬಿಸಿನೆಸ್ ಕಾರಿಡಾರ್ ಯೋಜನೆ ರೂಪಿಸಲಾಗಿದೆ. ಇದರ ಜೊತೆಗೆ ಬಿಡದಿಯಲ್ಲಿ ಎಐ ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದೇವೆ.
ಇನ್ನು ಬೆಂಗಳೂರಿನ ದಕ್ಷಿಣ ಭಾಗದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಅತ್ಯುತ್ತಮ ಹವಾಮಾನ ಹಾಗೂ ಸಂಸ್ಕೃತಿಗೆ ಬೆಂಗಳೂರನ್ನು ಮೀರಿಸುವ ಮತ್ತೊಂದು ನಗರ ಬೇರೊಂದಿಲ್ಲ. ನಮ್ಮ ಸರ್ಕಾರ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಇಲಾಖೆಯನ್ನು ಆರಂಭಿಸಲಿದೆ ಎಂದು ಡಿಸಿಎಂ ತಿಳಿಸಿದರು.
“ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಿಎಸ್‍ಆರ್ ಶಾಲೆಗಳನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕೆ ನೀವೆಲ್ಲರೂ ಹೆಚ್ಚಿನ ಸಹಕಾರ ನೀಡಬೇಕಾಗಿದೆ. ಜೊತೆಗೆ ಬೆಂಗಳೂರಿನಿಂದಾಚೆಗೆ ಕೈಗಾರಿಕೆಗಳ ಅಭಿವೃದ್ಧಿಗೆ ಹೊಸ ನೀತಿ ರೂಪಿಸಲಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ನೀವು ಬಲಿಷ್ಠವಾದರೆ, ನಾವು ಬಲಿಷ್ಠವಾಗುತ್ತೇವೆ.
ನಿಮ್ಮ ಜೊತೆಗಿನ ಸಹಭಾಗಿತ್ವಕ್ಕೆ ನಾವು ಎದುರು ನೋಡುತ್ತೇವೆ. ನಾವೆಲ್ಲರೂ ಸೇರಿ ಉತ್ತಮ ಬೆಂಗಳೂರು, ಉತ್ತಮ ಕರ್ನಾಟಕ ಹಾಗೂ ಉತ್ತಮ ಭಾರತದ ನಿರ್ಮಾಣ ಮಾಡೋಣ. ಬೆಂಗಳೂರು ಜಾಗತಿಕ ನಗರ, ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧಿಸಲು ಬಯಸುತ್ತೇವೆ. ಇದು ನಿಮ್ಮ ನಗರ, ಈ ನಗರವನ್ನು ಮತ್ತಷ್ಟು ಬಲವಾಗಿ ಬೆಳೆಸಲು ಸಹಕರಿಸಿ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶಿವಕುಮಾರ್, ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ್ದ ತಂತ್ರಜ್ಞಾನ ವಲಯದ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

