ನಗರಸಭೆಗೆ 1.62 ಕೋಟಿ ಉಳಿತಾಯ ಬಜೆಟ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಗರ ನಗರ ಸಭೆಯಲ್ಲಿ 1.62 ಕೋಟಿ ಉಳಿತಾಯದ ನೂತನ ಬಜೆಟ್ ಮಂಡಿಸಲಾಗಿದ್ದು ನಿರೀಕ್ಷೆಯಂತೆ

2026-27 ಸಾಲಿನ  ₹87.83 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ. ಹಾಗೆಯೇ ವಿವಿಧ ಕಾಮಗಾರಿಗಳು ಸೇರಿದಂತೆ ಇತರೆ ವೆಚ್ಚಗಳಿಗಾಗಿ ₹86.20 ಕೋಟಿ ಅಂದಾಜಿಸಲಾಗಿದೆ. ನಗರಸಭೆ ಸ್ವಂತ ಆದಾಯದಿಂದ ₹22.15 ಕೋಟಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನಗಳಿಂದ ₹56.87 ಕೋಟಿ ನಿರೀಕ್ಷಿಸಲಾಗಿದೆ. ಮಂಗಳವಾರ  ನಗರಸಭೆ ‌ ಅಧ್ಯಕ್ಷೆ ಕೆ.ಸುಮಿತ್ರ  ಸಾಲಿನ ₹1.62 ಕೋಟಿ ಉಳಿತಾಯ ಬಜೆಟ್ ಮಂಡಿಸಿದರು.

- Advertisement - 

ನಗರಾಭಿವೃದ್ದಿಗಾಗಿ 2026-27ನೇ ಸಾಲಿನ ಬಜೆಟ್ ನಲ್ಲಿ ಒಟ್ಟು 87 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗುತ್ತಿದ್ದು ಈ ಪೈಕಿ ಒಟ್ಟು 1.62 ಕೋಟಿ ಗಾತ್ರದ ಉಳಿತಾಯ ಬಜೆಟ್ ಇದಾಗಿದೆ ಎಂದು ನಗರಸಭಾ ಅಧ್ಯಕ್ಷರಾದ ಸುಮಿತ್ರ ಆನಂದ್ ಅವರು ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ  ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಮಾತನಾಡಿದ ಅವರು 87.83 ಕೋಟಿ ಬಜೆಟ್ ನಲ್ಲಿ ಖರ್ಚನ್ನು 86.20 ಕೋಟಿ ಎಂದು ಅಂದಾಜಿಸಲಾಗಿದ್ದು, 1.62 ಕೋಟಿ ಉಳಿತಾಯದ ಬಜೆಟ್ ನ್ನು ಇಂದು ಮಂಡನೆ ಮಾಡಲಾಗಿದೆ. ನಗರಸಭೆಯ ಆದಾಯ ಮೂಲಗಳಿಗೆ ಒತ್ತು ನೀಡಿ, ನಗರ ಸ್ವಚ್ಛತೆಗೆ ಆದ್ಯತೆ ನೀಡಿ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಬಜೆಟ್ ಮಂಡಿಸಲಾಗಿದೆ. ನಾಗರೀಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಗರದ ಆದಾಯ ತೆರಿಗೆ, ಸರಕಾರದ ಅನುದಾನಗಳ ಮೂಲಕ ಮೂಲ ಸೌಕರ್ಯ ಒದಗಿಸುವ ಜತೆಗೆ ಅಭಿವೃದ್ದಿಗೂ ಕೂಡ ಆದ್ಯತೆ ನೀಡಲಾಗಿದೆ ಎಂದರು.

- Advertisement - 

 ನಗರದ ನೈರ್ಮಲ್ಯಕ್ಕೆ ಬಜೆಟ್‌ನಲ್ಲಿ ಅನುದಾನ:
 ನಗರದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಿ, ಸಂರಕ್ಷಿಸುವ ಸಲುವಾಗಿ ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ರೂ.2 ಕೋಟಿ ಮತ್ತು ಉದ್ಯಾನವನಗಳ ನಿರ್ವಹಣೆಗಾಗಿ ರೂ.20 ಲಕ್ಷಗಳನ್ನು ಮೀಸಲಿರಿಸಲಾಗಿದೆ. ಸುಂದರ, ಸ್ವಚ್ಛ ಹಾಗೂ ನಿರ್ಮಲ ನಗರವನ್ನಾಗಿಸುವ ದೃಷ್ಟಿಯಿಂದ ನಗರ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾರ್ಯಗಳಿಗೆ ಮತ್ತು ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗಳಿಗಾಗಿ 4.10 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಸಿ ಮತ್ತು ಡಿ ಕಸ ಸಂಸ್ಕರಣಾ ಘಟಕ ಹಾಗೂ ಒಣಕಸ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಮತ್ತು ಪಾರಂಪರಿಕ ತ್ಯಾಜ್ಯ ವಿಲೆವಾರಿಗಾಗಿ 3.27 ಕೋಟಿ ಅನುದಾನ. ಸ್ವಚ್ಚ ಭಾರತ್ ಮಿಷನ್-2 ಯೋಜನೆಯಲ್ಲಿ ವಡ್ಡರಪಾಳ್ಯದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಗ್ರಹವಾಗಿರುವ 46,000 ಟನ್ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿಗಾಗಿ 4.77 ಕೋಟಿ ಅನುದಾನವನ್ನು ನಿಗದಿ ಮಾಡಲಾಗಿದೆ.

 ಬಜೆಟ್‌ನಲ್ಲಿ ಮಿನಿ ಮಾರುಕಟ್ಟೆ ಘೋಷಣೆ:
 ನಗರಸಭೆ ಬಜೆಟ್‌ನಲ್ಲಿ ಕೆ.ಆರ್ ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ 3 ಕೋಟಿ ಅನುದಾನ ಅಂದಾಜಿಸಲಾಗಿದೆ. ಸ್ಮಾರ್ಟ್ ಮಾರುಕಟ್ಟೆ ಮತ್ತು ಫುಡ್ ಕೋರ್ಟ್‌ಗಳ ನಿರ್ಮಾಣಕ್ಕೆ 3 ಕೋಟಿ. ನೇಕಾರರ ಭವನ ನಿರ್ಮಿಸಲು 10 ಲಕ್ಷ, ನಗರಸಭಾ ಕಚೇರಿಯ ಹಾಗೂ ಡಾ. ರಾಜಕುಮಾರ್ ಕಲಾಮಂದಿರದ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಕೆಗೆ 60 ಲಕ್ಷ ರೂ.ಅನುದಾನ ರೊಚ್ಚು ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಸ್ವಾಧೀನಕ್ಕಾಗಿ 2.50 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

 10,000 ಕುಡಿಯುವ ನೀರಿನ ನಳ ಸಂಪರ್ಕ:
ನಗರದ ಜನರಿಗೆ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸಲು ಸುಮಾರು 10,000 ಕುಡಿಯುವ ನೀರಿನ ನಳ ಸಂಪರ್ಕವನ್ನು ಸಾರ್ವಜನಿಕರಿಗೆ ಒದಗಿಸಲು ಅಮೃತ 2.0 ಯೋಜನೆಯಡಿಯಲ್ಲಿ 10 ಕೋಟಿಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಮಳೆನೀರು ಕೊಯ್ಲು ಸಂಗ್ರಹಣೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಫ್ರೋತ್ಸಾಹ ಧನ ನೀಡಲು 10 ಲಕ್ಷ ಅನುದಾನ ಮೀಸಲಿಡಲಾಗಿದೆ. ನಗರದ ಒಳಚರಂಡಿ ರೊಚ್ಚು ನೀರನ್ನು ಅಧುನಿಕ ರೀತಿಯಲ್ಲಿ ಸಂಸ್ಕರಿಸಿ ಶುದ್ದೀಕರಿಸಲು ಎಸ್.ಟಿ.ಪಿ ನಿರ್ಮಾಣಕ್ಕೆ 4.77 ಕೋಟಿ ಅನುದಾನ ತೆಗೆದಿಡಲಾಗಿದೆ.

 ನಗರದಲ್ಲಿ 100ಸಿಸಿಟಿವಿ ಕ್ಯಾಮರಾ ಅಳವಡಿಕೆ:
 ನಗರದಲ್ಲಿ ಕಸ ಸುರಿಯುತ್ತಿರುವ ಪ್ರಮುಖ ಏರಿಯಾಗಳಲ್ಲಿ ಒಂದು ನೂರು ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿ ಆಮೂಲಕ ಎಲ್ಲೆಂದರಲ್ಲಿ ಕಸ ಸುರಿಯುವ ವ್ಯವಸ್ಥಗೆ ಬ್ರೇಕ್ ಹಾಕುವುದು.

 ನಗರದಲ್ಲಿ ನೂರು ಸಿಸಿಟಿವಿ ಕ್ಯಾಮರಾ ಅಳವಡಿಸುವುದರಿಂದ ನಗರದಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಹಾಯಕವಾಗಲಿದೆ.

  ಈ ಭಾರಿ 87 ಕೋಟಿಗಳಷ್ಟು ಭಾರಿ ಬಜೆಟ್ ನ್ನು ಮಂಡಣೆ ಮಾಡಲಾಗಿದ್ದು ಈ ಬಾರಿಯಾದರೂ 95.5 ರಷ್ಟು ಪರಿಶಿಷ್ಟ ಜನಾಂಗದವರೇ ಇರುವ ನಮ್ಮ ಕಚೇರಿಪಾಳ್ಯ ವಾರ್ಡ್ ಗೆ ಶೇ.24.10% ರ ಅನುದಾನದಲ್ಲಿ ಹೆಚ್ಚನ ಹಣವನ್ನು ಬಿಡುಗಡೆ ಮಾಡಿ ನಮ್ಮ ವಾರ್ಡ್ ಅಭಿವೃದ್ದಿಗೆ ಸಹಕರಿಸಬೇಕು.
ರೂಪಿಣಿ ಮಂಜುನಾಥ್.ಟಿ ಕಾಂಗ್ರೆಸ್ ಸದಸ್ಯರು.

  ದೂರದೃಷ್ಟಿ ಇಲ್ಲದೆ ವಾಸ್ತವಕ್ಕೆ ದೂರವಾದ ಬಜೆಟ್. ಹಿಂದಿನ ವರ್ಷದ ಘೋಷಣೆಗಳು ಕಾರ್ಯಗತವಾಗಿಲ್ಲ. ಒಟ್ಟಾರೆ ನಿರಾಶಾಯದಾಯಕ ಬಜೆಟ್ ಆಗಿದೆ.
ಚಂದ್ರಮೋಹನ್, ಕಾಂಗ್ರೆಸ್ ಸದಸ್ಯ.

 ಈ ಬಾರಿ ದೊಡ್ಡಬಳ್ಳಾಪುರ ನಗರಸಭೆಯ 87 ಕೋಟಿ ಬಜೆಟ್ ಮಂಡಿಸಲಾಗಿದೆ. ಈ ಬಗ್ಗೆ ತೃಪ್ತಿಕರವಾಗಿದೆ. ಸರಕಾರದ ಹೆಚ್ಚಿನ ಅನುದಾನ ನೀಡಬೇಕು. ತೆರಿಗೂ ಕೂಡ ಸಮಪರ್ಕವಾಗಿ ಸಂಗ್ರಹಿಸಬೇಕು.
ಮಲ್ಲೇಶ್, ಉಪಾಧ್ಯಕ್ಷ, ದೊಡ್ಡಬಳ್ಳಾಪುರ ನಗರಸಭೆ.

 ದೊಡ್ಡಬಳ್ಳಾಪುರದ ನಗರಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡನೆಗೂ ಮುನ್ನ ಅಧ್ಯಕ್ಷೆ ಸಮಿತ್ರಾ ಸದಸ್ಯರೊಂದಿಗೆ ಬಜೆಟ್ ಪ್ರತಿ ಪ್ರದರ್ಶಿಸಿದರು. ಪೌರಾಯುಕ್ತ ಕಾರ್ತಿಕೇಶ್ವರ, ಉಪಾಧ್ಯಕ್ಷ ಮಲ್ಲೇಶ, ಸದಸ್ಯರಾದ ಪದ್ಮನಾಭ, ಶಿವು, ತ.‌ನ ಪ್ರಭುದೇವ, ಎಂಜಿ ಶ್ರೀನಿವಾಸ್,ಆನಂದ್, ನಾಗರಾಜ್, ವಡ್ಡರಹಳ್ಳಿ ರವಿ,ಚಂದ್ರಮೋಹನ್,ಹಂಸಪ್ರಿಯ, ಸುಧಾರಾಣಿ, ಕಾಂತರಾಜು,ಅಖಿಲೇಶ್, ನಾಗರತ್ನಮ್ಮ,ಆದಿಲಕ್ಷ್ಮೀ, ಇಂದ್ರಾಣಿ, ನಾಗರಾಜು, ನಾಗವೇಣಿ, ಸುರೇಶ್,ನವೀನ್, ಕೆ. ಮಂಜುಳ, ಪ್ರಭಾ ಸೇರಿದಂತೆಎಲ್ಲಾ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

 

Share This Article
error: Content is protected !!
";