ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಸವಲತ್ತು ಹಾಗೂ ನೆರವನ್ನು ನೀಡಲು ನಮ್ಮ ಸರ್ಕಾರ ಸದಾ ಸಿದ್ದ. ರಾಜ್ಯ ಬಜೆಟ್ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ನಿರಂತರವಾಗಿ ಅನುದಾನವನ್ನು ನೀಡುತ್ತಾ ಬಂದಿದೆ. ರಾಜ್ಯದಿಂದ ಯಾರಾದರೂ ಒಲಂಪಿಕ್ಸ್ ನಲ್ಲಿ ದೇಶಕ್ಕೆ ಒಂದು ಚಿನ್ನ ತನ್ನಿ ಎಂದು ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಅವರು ಇಂದು ಕರ್ನಾಟಕ ಒಲಂಪಿಕ್ ಸಂಸ್ಥೆ ವತಿಯಿಂದ ನಗರದ ಯವನಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.
ಚಿನ್ನದ ಪದಕ ಪಡೆದವರಿಗೆ ೬ ಕೋಟಿ ಹಣವನ್ನು ಮೀಸಲಿಟ್ಟಿದ್ದು, ಬೆಳ್ಳಿ ಪದಕ ಪಡೆದವರಿಗೆ ೪ ಕೋಟಿ ಹಣ ಇಡಲಾಗಿದೆ. ಆದರೆ ಯಾರೂ ಪದಕವನ್ನು ತಂದಿಲ್ಲ. ದೇಶಕ್ಕೆ ಯಾರಾದರೂ ಚಿನ್ನದ ಪದಕ ತನ್ನಿ ಎಂದು ತಿಳಿಸಿದರು.
ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು ಎನ್ನುವ ಪ್ರೋತ್ಸಾಹದಾಯಕ ಉದ್ದೇಶದಿಂದ ಕರ್ನಾಟಕ ಒಲಂಪಿಕ್ ಸಂಸ್ಥೆಯು ಸತತ ೨೨ ವರ್ಷಗಳಿಂದ ಈ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ ಎಂದರು.
ಗೋವಿಂದರಾಜು ಅವರು ಒಲಂಪಿಕ್ ಸಂಸ್ಥೆ ಅಧ್ಯಕ್ಷರಾಗಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ನಿರಂತರ ಶ್ರಮಿಸುತ್ತಿದ್ದಾರೆ. ನಾನು ಕ್ರೀಡಾಪಟು ಅಲ್ಲದಿದ್ದರೂ ಕ್ರೀಡಾಪ್ರೇಮಿ. ನಾನು ಶಾಲಾ, ಕಾಲೇಜಿನಲ್ಲಿ ಎಲ್ಲಾ ಕ್ರೀಡೆಗಳಲ್ಲೂ ಭಾಗವಹಿಸುತ್ತಿದ್ದೆ. ಒಂದೂ ಪ್ರಶಸ್ತಿ ಬರಲಿಲ್ಲ. ಆದರೆ ಶಾಸಕರ ಕ್ರೀಡಾಕೂಟದಲ್ಲಿ ಸಿಕ್ಕಾಪಟ್ಟೆ ಪ್ರಶಸ್ತಿ ಬಂತು ಎಂದು ಸ್ಮರಿಸಿದರು.
ಕ್ರೀಡೆಯಲ್ಲಿ ಸಣ್ಣ ಪುಟ್ಟ ದೇಶಗಳೆಲ್ಲಾ ಬಹಳ ಮುಂದಿವೆ. ಆದರೆ, ಭಾರತದಂತಹ ದೊಡ್ಡ ದೇಶಕ್ಕೆ ಒಲಂಪಿಕ್ ನಲ್ಲಿ ಒಂದೂ ಚಿನ್ನ ಬರಲಿಲ್ಲ ಎನ್ನುವುದು ಬೇಸರದ ಸಂಗತಿ ಎಂದರು.
ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಇರುವ ಎಲ್ಲಾ ಅನುಕೂಲಗಳನ್ನು ಕಲ್ಪಿಸಿಕೊಡಲು ನಮ್ಮ ಸರ್ಕಾರ ಸದಾ ಸಿದ್ಧ. ನಮ್ಮ ರಾಜ್ಯದ ಕ್ರೀಡಾಪಟುಗಳು ಒಲಂಪಿಕ್ಸ್ ನಲ್ಲಿ ಭಾಗವಹಿಸಿ ದೇಶಕ್ಕೆ ಚಿನ್ನ ತರಲಿ ಎಂದು ಆಶಿಸಿದರು.
ಶಾಲಾ ಮಕ್ಕಳು ಕ್ರೀಡೆಯಲ್ಲಿ ಹೆಚ್ಚೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಕ್ರೀಡಾ ಮಕ್ಕಳಿಗೆ ಶೇ೨೫ ರಷ್ಟು ಹಾಜರಾತಿ ಹಾಗೂ ೧೦ ಗ್ರೇಸ್ ಮಾರ್ಕ್ಸ್ ನೀಡುವುದರ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸಿದವರು ಓದಿಗೆ ತೊಂದರೆಯಾಗುತ್ತದೆ ಎನ್ನುವುದು ತಪ್ಪು ಕಲ್ಪನೆ ಸ್ವತಃ ಫುಟ್ಬಾಲ್ ಆಟಗಾರನಾದ ನನಗೆ ಯಾವುದೇ ತೊಂದರೆ ಯಾಗಿಲ್ಲ. ಕ್ರೀಡೆ ಮನಸ್ಸಿಗೆ ಹಾಗೂ ಶರೀರಕ್ಕೆ ನೆಮ್ಮದಿ ನೀಡುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ಶಾಸಕರು ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ರಂದೀಪ್.ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ .ಆರ್ ಹಾಗೂ ಇತರರು ಉಪಸ್ಥಿತರಿದ್ದರು.