ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗ ಹೊರ ವಲಯದಲ್ಲಿರುವ ಗುರುಪುರದ ಬಿಜಿಎಸ್ ಪ್ರೌಢಶಾಲಾ ವಿಭಾಗದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರರಷ್ಟು ಫಲಿತಾಂಶ ಪಡೆದಿರುವುದು ವಿಶೇಷ ಸಂಗತಿ.
ಪರೀಕ್ಷೆಗೆ ಕುಳಿತ 66 ವಿದ್ಯಾರ್ಥಿಗಳು ಪಾಸಾಗಿದ್ದು, 16 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 23 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 24 ಪ್ರಥಮ ಶ್ರೇಣಿಯಲ್ಲಿ, 3 ದ್ವಿತೀಯ ದರ್ಜೆಯಲ್ಲಿ, ತೇರ್ಗಡೆ ಹೊಂದಿರುತ್ತಾರೆ.
ಗ್ರಾಮೀಣ ಭಾಗದ ಹೆಚ್ಚು ಮಕ್ಕಳನ್ನು ಹೊಂದಿರುವ ಈ ಪ್ರೌಢಶಾಲೆಯಲ್ಲಿ ನುರಿತ ಶಿಕ್ಷಕರು ಗುರುಕುಲ ಮಾದರಿಯಲ್ಲಿ ವಸತಿ ವ್ಯವಸ್ಥೆಯ ಸಹಿತ ಶಿಕ್ಷಣ ನೀಡುತ್ತಿರುವುದು ಫಲಿತಾಂಶ ಹೆಚ್ಚಳಕ್ಕೆ ಕಾರಣವಾಗಿದೆ.
ಈ ಶಿಕ್ಷಣ ಸಂಸ್ಥೆಯ ಆವಣದಲ್ಲಿ ಸುಂದರ ಪ್ರಕೃತಿಯ ವಾತಾವರಣವಿದ್ದು ಕಟ್ಟಡದಲ್ಲಿ ಸುಸಜ್ಜಿತವಾದ ಕೊಠಡಿಗಳು ಗ್ರಂಥಾಲಯ ಕ್ರೀಡಾಂಗಣ ಪ್ರಯೋಗಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಕಂಡು ಬರುವುದು ಮತ್ತೊಂದು ವಿಶೇಷ.
ಪ್ರಿಯಾ ಆರ್.625+ಕ್ಕೆ 617ಅಂಕ ಗಳಿಸಿ, ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದು, ಶಾಲೆಗೆ ಪ್ರಥಮ ಸ್ಥಾನ ಪಡೆದರೆ,ರೋಹಿಣಿ ಎಂ.ಪಟೇಲ್ 625 ಕ್ಕೆ 613 ಅಂಕಗಳಿಸುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಶ್ರಾವ್ಯ ವಿ., 611, ಭುವನ್ ಹೆಚ್. ಎಸ್. 603, ಚಂದನ್ ಸಿ. ಆರ್. ಪ್ರಾರ್ಥನ ಆರ್. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಸಾಯಿನಾಥ ಸ್ವಾಮೀಜಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲ ಸುರೇಶ್ ಎಸ್. ಹೆಚ್., ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.