ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಪಿಎಲ್ ಕಪ್ ಗೆದ್ದ ಆರ್ಸಿಬಿ ತಂಡಕ್ಕೆ ವಿಜಯೋತ್ಸವ ಆಯೋಜನೆ ಮಾಡಿದ್ದ ಸಂದರ್ಭದಲ್ಲಿ ನಡೆದ ದುರ್ಘಟನೆ ಆಕಸ್ಮಿಕವಲ್ಲ, ಇದೊಂದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡವಲ್ಲವೇ? ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಜೂನ್-4ರಂದು ಬುಧವಾರ ಸಂಜೆ ನಡೆದ ಕಾಲ್ತುಳಿತದ ಘಟನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ಕೆಲ ಪ್ರಶ್ನೆಗಳನ್ನು ಸಿಟಿ ರವಿ ಅವರು ಕೇಳಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದ್ದರೂ, ಸೂಕ್ತ ಜನಸಂದಣಿ ನಿರ್ವಹಣಾ ಯೋಜನೆ (ಕ್ರೌಡ್ ಮ್ಯಾನೇಜ್‍ಮೆಂಟ್ ಪ್ಲಾನ್) ಏಕೆ ರೂಪಿಸಲಿಲ್ಲ? ಹತ್ತಾರು ಸಾವಿರಾರು ಜನ ಸೇರಿದ್ದರೂ, ತುರ್ತು ಸೇವೆಗಳಾದ (ಅಗ್ನಿಶಾಮಕ ದಳ, ಆಂಬ್ಯುಲೆನ್ಸ್, ವೈದ್ಯಕೀಯ ತಂಡ) ಸಂಖ್ಯೆ ಅತ್ಯಂತ ಕಡಿಮೆಯಿತ್ತು ಏಕೆ? ಎಂದು ಕೇಳಿದ್ದಾರೆ.
ಹೆಚ್ಚಿವ ಜನರು ಸೇರುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ಮುಂಚಿತವಾಗಿ ಎಚ್ಚರಿಕೆ ನೀಡಲಿಲ್ಲವೇ? ನೀಡಿದ್ದರೂ, ಆ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದು ಏಕೆ? ಕ್ರೀಡಾಂಗಣದ ಸಾಮರ್ಥ್ಯಕ್ಕೆ ಅಧಿಕ ಜನರು ಸೇರುವ ಸಾಧ್ಯತೆಯನ್ನು ಏಕೆ ಅಂದಾಜಿಸಲಾಗಲಿಲ್ಲ? ಇದು ಗಂಭೀರ ನಿರ್ಲಕ್ಷ್ಯವಲ್ಲವೇ? ಎಂದು ಸಿಟಿ ರವಿ ಅವರು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾ ಪ್ರೇಮಿಗಳು ಸೇರುವ ನಿರೀಕ್ಷೆ ಇತ್ತು. ಆದರೆ ಸರ್ಕಾರ ನಡೆಸುವವರಿಗೆ ಮಾತ್ರ ಎಷ್ಟು ಜನ ಸೇರಬಹುದು ಎಂಬ ಅಂದಾಜು ಇರಲಿಲ್ಲ ಎಂಬ ನಿಮ್ಮ ಮಾತು ಸರ್ಕಾರದ ಆಡಳಿತ ವೈಫಲ್ಯವನ್ನು ಒಪ್ಪಿಕೊಂಡಂತಲ್ಲವೇ? ಕಾರ್ಯಕ್ರಮಕ್ಕೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಸರಿಯಾಗಿ ನಿರ್ವಹಿಸದಿರಲು ಕಾರಣವೇನು? ಎಂದು ಅವರು ಕೇಳಿದ್ದಾರೆ.
ಬೆಂಗಳೂರಿನಂತಹ ನಗರದಲ್ಲಿ ಒಂದೇ ರೀತಿಯ 2 ದೊಡ್ಡ ಕಾರ್ಯಕ್ರಮ ಬೇಕಿತ್ತೇ? ಇದು ಜನಸಂದಣಿಗೆ ಮತ್ತಷ್ಟು ಕಾರಣವಾಗಲಿಲ್ಲವೇ? ಪೊಲೀಸರು ಬೇಡ ಅಂದರೂ ಅವರ ಮೇಲೆ ಒತ್ತಡ ಹಾಕಿ ಕಾರ್ಯಕ್ರಮ ನಡೆಸಿದ ಉದ್ದೇಶವಾದರೂ ಏನು? ಎಂದು ಸಿ.ಟಿ. ರವಿ ಖಾರವಾಗಿ ಪ್ರಶ್ನಿಸಿದ್ದಾರೆ.
ಕಾರ್ಯಕ್ರಮ ಆಯೋಜಕರು ಯಾರು – ರಾಜ್ಯ ಸರ್ಕಾರವೇ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಳಿತ ಮಂಡಳಿಯೇ? ಜವಾಬ್ದಾರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಏಕೆ? ಎಂದು ರವಿ ಅವರು ಪ್ರಶ್ನಿಸಿದ್ದಾರೆ.
ಕೇವಲ ಒಂದು ಫ್ರಾಂಚೈಸಿ ಗೆಲುವನ್ನು ರಾಜ್ಯ ಸರ್ಕಾರವೇ ಸಂಭ್ರಮಿಸುವ ಅಗತ್ಯ ಏನಿತ್ತು? ಇದು ಸರ್ಕಾರದ ಆದ್ಯತೆಯಾಗಬೇಕಿತ್ತೇ? ಆರ್ಸಿಬಿ ಪ್ರಶಸ್ತಿ ಗೆದ್ದ 12 ಗಂಟೆಯೊಳಗೆ ವಿಧಾನಸೌಧದ ಮುಂದೆ ಸಮಾರಂಭ ಏರ್ಪಡಿಸುವ ಆತುರವೇನಿತ್ತು? ಡಿ.ಕೆ. ಶಿವಕುಮಾರ್ ಎಲ್ಲಾ ಶ್ರೇಯಸ್ಸು ತನಗೆ ಸಿಗಲಿ ಎಂದು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರಾ? ಈ ಗೆಲುವಿನ “ಕ್ರೆಡಿಟ್” ತೆಗೆದುಕೊಳ್ಳುವ ಹಪಾಹಪಿ ಸರ್ಕಾರಕ್ಕೆ ಏಕೆ ಬಂತು? ಇದು ರಾಜಕೀಯ ಲಾಭಕ್ಕಾಗಿ ಮಾಡಿದ ಪ್ರಯತ್ನವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕಾಲ್ತುಳಿತ ಸಂಭವಿಸಿದಾಗ ಸಮಾರಂಭ ನಿಲ್ಲಿಸಬೇಕಿತ್ತಲ್ಲವೇ? ಕ್ರೀಡಾಭಿಮಾನಿಗಳ ಸಾವಿಗೆ ಸರ್ಕಾರದ ಈ ‘ಕ್ರಿಮಿನಲ್ ನಿರ್ಲಕ್ಷ್ಯ‘ (ಕ್ರಿಮಿನಲ್ ನೆಗ್ಲಿಜೆನ್ಸ್) ಮತ್ತು ‘ಪ್ರಚಾರದ ಹಸಿವು‘ ಕಾರಣವಲ್ಲವೇ? ಸರ್ಕಾರ ಕೇವಲ ಭದ್ರತೆ ಒದಗಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಇಂತಹ ಬೃಹತ್ ಕಾರ್ಯಕ್ರಮಕ್ಕೆ ಸೂಕ್ತ ಪರವಾನಗಿ ನೀಡುವುದು ಮತ್ತು ನಿಯಮಾವಳಿಗಳನ್ನು ವಿಧಿಸುವುದು ಸರ್ಕಾರದ ಕರ್ತವ್ಯವಲ್ಲವೇ? ಕಾಲ್ತುಳಿತ ಸಂಭವಿಸಿದಾಗಲೂ, ಸಂಭ್ರಮಾಚರಣೆಯನ್ನು ಏಕೆ ಮುಂದುವರಿಸಲು ಅವಕಾಶ ನೀಡಲಾಯಿತು? ಅದನ್ನು ತಕ್ಷಣ ನಿಲ್ಲಿಸಬಹುದಿತ್ತಲ್ಲವೇ? ಎಂದು ವಿಪ ಸದಸ್ಯ ರವಿ ಅವರು ಪ್ರಶ್ನಿಸಿದ್ದಾರೆ.
ಸಂಭ್ರಮ: ಉಪಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಸೇರಿದಂತೆ ಹಲವು ಸಚಿವರು ಮತ್ತು ಅಧಿಕಾರಿಗಳು ಕಾರ್ಯಕ್ರಮದ ಸ್ಥಳದಲ್ಲಿದ್ದರೂ ಪರಿಸ್ಥಿತಿ ನಿಯಂತ್ರಿಸಲು ಏಕೆ ವಿಫಲರಾದರು? ಅವರ ಹಾಜರಿ ಕೇವಲ ಪ್ರಚಾರಕ್ಕಾಗಿತ್ತೇ? ಅವಘಡ ಸಂಭವಿಸಿದ ತರುವಾಯವೂ ಕ್ರೀಡಾಂಗಣದೊಳಗೆ ಸಂಭ್ರಮಾಚರಣೆಯನ್ನು ಕೂಡಲೇ ಸ್ಥಗಿತಗೊಳಿಸಬೇಕಿತ್ತು.
ಆದರೆ ಸ್ವತಃ ಉಪಮುಖ್ಯಮಂತ್ರಿಗಳೇ ಸೂತಕದ ಮನೆಯಾಗಿದ್ದ ಸಮಯದಲ್ಲಿ ಮೈದಾನದೊಳಗಿನ ಸಂಭ್ರಮದಲ್ಲಿ ಭಾಗಿಯಾಗಿ ಮೃತಪಟ್ಟವರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ದುಃಖವಾಗಲಿ ಅಥವಾ ನೋವಾಗಲಿ ಇಲ್ಲದಿರುವುದು ಸತ್ಯವಲ್ಲವೇ?. ಇದು ಸರ್ಕಾರ, ಸರ್ಕಾರ ನಡೆಸುವವರ ಸಂವೇದನಾ ಶೂನ್ಯತೆಗೆ ಸಾಕ್ಷಿಯಲ್ಲವೇ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಅದು ಕ್ರಿಕೆಟ್ ಅಸೋಸಿಯೇಷನ್ ಕಾರ್ಯಕ್ರಮ ಎಂದು ಸರ್ಕಾರದ ತಪ್ಪನ್ನು ಮುಚ್ಚಿ, ತಮ್ಮ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುವ ಕೀಳು ಮಟ್ಟದ ವರ್ತನೆಯನ್ನು ನೀವು ತೋರಿದ್ದೀರಿ. ಜನ ಸೇರುತ್ತಾರೆ ಎಂದು ಅರಿವಿದ್ದಾಗ ಅಲ್ಲಿ ಬರುವವರಿಗೆ ರಕ್ಷಣೆ ನೀಡಬೇಕಾದದ್ದು ಸರ್ಕಾರದ ಕರ್ತವ್ಯ ಎಂಬುದನ್ನು ನೀವು ಮರೆತಿದ್ದೀರಾ? ಬೇಜವಾಬ್ದಾರಿ ಸರ್ಕಾರದ ವಿರುದ್ಧ ಆಕ್ರೋಶ ಪ್ರಕಟಿಸುವುದು ನಮ್ಮ ಕರ್ತವ್ಯ. ಸರ್ಕಾರ ತಪ್ಪೆಸಗಿ ಅದನ್ನು ಮುಚ್ಚಿಕೊಳ್ಳಲು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಖಂಡನೀಯ. ಇವರನ್ನು ಪ್ರಶ್ನಿಸುವುದೂ ತಪ್ಪೇ ? ಎಂದು ವಿಪ ಸದಸ್ಯ ಸಿ.ಟಿ ರವಿ ಪ್ರಶ್ನಿಸಿದ್ದಾರೆ.