ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೀಳಿಸಲು 1200 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆಂದು ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಯತ್ನಾಳ್ ನೀಡಿರುವ ಹೇಳಿಕೆ ಆಧರಿಸಿ ಕೂಡಲೇ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದಿಂದ ಸಮಗ್ರ ತನಿಖೆಯಾಗಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಅವರು ಸೋಮವಾರ ಮಾಧ್ಯಮಗಳೊಂದಿಗೆ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸಲು ರಾಜಕೀಯ ಷಡ್ಯಂತ್ರ ರೂಪಿಸಲಾಗಿದೆ. ಸರ್ಕಾರ ಬೀಳಿಸುವ ಕಾರ್ಯಕ್ಕಾಗಿ 1,200 ಕೋಟಿ ರೂ. ಹಣ ಮೀಸಲ ಇಡಲಾಗಿದೆ ಎಂದು ಸ್ವಪಕ್ಷದವರೇ ಆದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದು ಇದರ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಡಿಸಿಎಂ ಆಗ್ರಹ ಮಾಡಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಕಾಂಗ್ರೆಸ್ ಕಾನೂನು ತಂಡದೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇವೆ. ಸರ್ಕಾರ ಬೀಳಿಸಲು ಬಿಜೆಪಿ ಕಡೆಯಿಂದ 1,200 ಕೋಟಿ ರೂಪಾಯಿ ಹಣ ರೆಡಿಯಾಗಿದೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಈ ಮಾಹಿತಿಯನ್ನು ತಿಳಿಸಿದ್ದೇನೆ.
ಇದು ತೆರಿಗೆ ಇಲಾಖೆ ಹಾಗೂ ಇಡಿ(ಜಾರಿ ನಿರ್ದೇಶನಾಲಯ) ತನಿಖೆಯ ವ್ಯಾಪ್ತಿಗೆ ಬರುವ ವಿಚಾರ. ದೂರು ನೀಡುವ ಸಂಬಂಧ ಇಂದು ಚರ್ಚೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
1200 ಕೋಟಿ ರೂ. ದೊಡ್ಡಮೊತ್ತದ ಹಣಕಾಸಿನ ವಿಷಯ ಆಗಿರುವುದರಿಂದ ಆದಾಯ ತೆರಿಗೆ ಇಲಾಖೆಯಿಂದ ತನಿಖೆ ಮಾಡಬೇಕು. ಈ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬುದನ್ನು ತಿಳಿಯಲು ನಾನು ಕೆಪಿಸಿಸಿಯಲ್ಲಿ ಸಭೆ ಕರೆದಿದ್ದೇನೆ. ಅಲ್ಲದೆ ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಭೇಟಿ ಮಾಡಿ, ಈ ಕುರಿತು ಕಾನೂನು ಆಯ್ಕೆಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ಡಿಸಿಎಂ ತಿಳಿಸಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೀಳಿಸುವ ಷಡ್ಯಂತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರಿದ್ದಾರೆ. ಸರ್ಕಾರ ಬೀಳಿಸುವ ಕಾರ್ಯದಲ್ಲಿ ಬಿಜೆಪಿ ಹೈಕಮಾಂಡ್‌ಗೆ ಆಸಕ್ತಿಯಿಲ್ಲದಿದ್ದರೂ ಬಿಜೆಪಿಯೊಳಗಿನ ಕೆಲವು ವಿಭಾಗಗಳು ಆಪರೇಷನ್ ಕಮಲದ ಬಗ್ಗೆ ಯೋಚಿಸುತ್ತಿವೆ, ಸರ್ಕಾರ ಬೀಳಿಸುವ ಸಂಚಿನ ಬಗ್ಗೆ ನನಗೆ ಮಾಹಿತಿ ಇದೆ ಎಂದು ಬಿಜೆಪಿ ಶಾಸಕ ಯತ್ನಾಳ್ ದೂರಿದ್ದನ್ನು ಸ್ಮರಿಸಬಹುದಾಗಿದೆ.