ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ಭಾನುವಾರದಂದು ಚಿತ್ರದುರ್ಗದಲ್ಲಿ ಜರುಗಿದ ನೀಟ್ ಪರೀಕ್ಷೆ ಸುಗಮವಾಗಿ ಜರುಗಿದ್ದು, ಒಟ್ಟು 141 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ನೀಟ್ ಪರೀಕ್ಷೆಗಾಗಿ ಜಿಲ್ಲೆಗೆ ಒಟ್ಟು 3019 ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲಾಗಿತ್ತು. ಇದಕ್ಕಾಗಿ ಒಟ್ಟು 06 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಭಾನುವಾರದಂದು ಮಧ್ಯಾಹ್ನ 02 ರಿಂದ ಸಂಜೆ 05 ರವರೆಗೆ ಜರುಗಿದ ನೀಟ್ ಪರೀಕ್ಷೆ ಸುಗಮವಾಗಿ ಹಾಗೂ ಯಾವುದೇ ಗೊಂದಲಗಳಿಲ್ಲದ ರೀತಿ ಅಚ್ಚುಕಟ್ಟಾಗಿ ಜರುಗಿದ್ದು, 3019 ವಿದ್ಯಾರ್ಥಿಗಳ ಪೈಕಿ 2878 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 141 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರ ಜರುಗಿದ ನೀಟ್ ಪರೀಕ್ಷೆ ಕಾರ್ಯಗಳ ಕುರಿತಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಎಲ್ಲ 06 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷಾ ಪ್ರಕ್ರಿಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ನೀಟ್ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಪರೀಕ್ಷಾ ಕೇಂದ್ರದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ, ಪೊಲೀಸ್ ಬಂದೋಬಸ್ತ್ ಕಾರ್ಯ ಕೈಗೊಳ್ಳಲಾಗಿತ್ತು.