ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಕ್ತ ವ್ಯಾಪಾರ ಒಪ್ಪಂದದ ಹಿನ್ನಲೆಯಲ್ಲಿ ಬ್ರಿಟನ್ ಕಂಪನಿಗಳು ಕರ್ನಾಟಕ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಬ್ರಿಟನ್ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ಟೆಸ್ಕೋದಿಂದ 15 ಸಾವಿರ ಉದ್ಯೋಗ ಸೃಷ್ಟಿ! ಆಗಲಿವೆ ಎಂದರು.
ಬೆಂಗಳೂರಿನಲ್ಲಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್ ಆಯೋಜಿಸಿದ್ದ ಐತಿಹಾಸಿಕ ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡಿದ್ದರು.
ಈ ಮಹತ್ವದ ಒಪ್ಪಂದದಿಂದ ದ್ವಿಪಕ್ಷೀಯ ವಾಣಿಜ್ಯವು ವಾರ್ಷಿಕ £25 ಬಿಲಿಯನ್ ಹೆಚ್ಚಳವಾಗಲಿದ್ದು, ಭಾರತದಿಂದ ಬ್ರಿಟನ್ ಗೆ ರಫ್ತಾಗುವ ಶೇಕಡಾ 99 ಉತ್ಪನ್ನಗಳಿಗೆ ಸುಂಕ ರದ್ದು, ಹೂಡಿಕೆ, ಉದ್ಯೋಗ ಮತ್ತು ನಾವೀನ್ಯತೆಗಾಗಿ ಹೊಸ ದಾರಿಗಳು ತೆರೆದಿಡಲಿದೆ ಎಂದು ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಟೆಸ್ಕೋ ಕಂಪನಿ ಹೊಸ ವಿತರಣಾ ಕೇಂದ್ರ ಸ್ಥಾಪಿಸಿ 15,000 ಉದ್ಯೋಗಗಳನ್ನು ಸೃಷ್ಟಿಸಲಿದೆ. ರೋಲ್ಸ್–ರಾಯ್ಸ್ ಕೂಡ ಹೊಸ ಹೂಡಿಕೆ ಅವಕಾಶಗಳನ್ನು ಪರಿಶೀಲಿಸುತ್ತಿದೆ. ಈಗಾಗಲೇ ಬಿಎಇ ಸಿಸ್ಟಮ್ಸ್, ಎಆರ್ಎಂ, ಎಚ್ಎಸ್ಬಿಸಿ, ಅವಿವಾ ಮುಂತಾದ ಬ್ರಿಟಿಷ್ ಕಂಪನಿಗಳು ರಾಜ್ಯದಲ್ಲಿ 30,000 ಜನರಿಗೆ ಉದ್ಯೋಗ ಒದಗಿಸುತ್ತಿವೆ.
ಅತ್ಯಾಧುನಿಕ ಮೂಲಸೌಕರ್ಯ, ಶ್ರೇಷ್ಠ ಪ್ರತಿಭೆ ಮತ್ತು ಕೈಗಾರಿಕಾಸ್ನೇಹಿ ವಾತಾವರಣ ಹೊಂದಿರುವ ಕರ್ನಾಟಕ, ಹೂಡಿಕೆದಾರರಿಗೆ ತ್ವರಿತ ಅನುಮತಿಗಳು, ಸ್ಥಿರ ನೀತಿ, ಮತ್ತು ದೃಢ ಬೆಂಬಲ ನೀಡಲು ಬದ್ಧವಾಗಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರೇಡ್ ಕಮಿಷನರ್ ಹರಿಜಿಂದರ್ ಕಂಗ್, ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಸೇರಿದಂತೆ ಇತರರು ಭಾಗವಹಿಸಿದ್ದರು.

