ಕೃತಕ ಬುದ್ಧಿಮತ್ತೆ ಸರ್ವರ್​ಗಳ ಉತ್ಪಾದನೆಗೆ 1,500 ಕೋಟಿ ಹೂಡಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬುರ್ಕಾನ್ ವರ್ಲ್ಡ್ ಇನ್ವೆಸ್ಟ್ಮೆಂಟ್ ಗ್ರೂಪ್ ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ(
AI) ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಅತ್ಯಾಧುನಿಕ ಎಐ ಸರ್ವರ್​ಗಳ ಉತ್ಪಾದನೆಗೆ 1,500 ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದೆ ಬಂದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಗುರುವಾರ ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಬುರ್ಕಾನ್ ಸಮೂಹದ ಸಿಇಒ ಶಫಿ ಎಂ.ಖಾನ್ ಮತ್ತು ಅವರ ತಂಡದೊಂದಿಗೆ ಹೂಡಿಕೆ ಮತ್ತಿತರ ಸಂಗತಿಗಳ ಬಗ್ಗೆ ಸಚಿವರು ವಿಸ್ತೃತ ಮಾತುಕತೆ ನಡೆಸಿದರು.

- Advertisement - 

ಅಮೆರಿಕದ ಮಿಯಾಮಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆ ದೇವನಹಳ್ಳಿ ಸಮೀಪ 10-15 ಎಕರೆ ಭೂಮಿ ಕೇಳಿದ್ದು, ಅದನ್ನು ಒದಗಿಸಲಾಗುವುದು. ಇದರಿಂದ ಉತ್ಪಾದನಾ ವಲಯದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಶಿಗ್ಗಾವ್ ಶಾಸಕ ಯಾಸಿರ್ ಅಹಮದ್ ಪಠಾಣ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು, ಕ್ವಾಡ್-ಜೆನ್ ಕಂಪನಿ ಅಧ್ಯಕ್ಷ ಸಿ.ಎಸ್.ರಾವ್ ಉಪಸ್ಥಿತರಿದ್ದರು.

- Advertisement - 

ಬಳಿಕ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, ಡೇಟಾ ಸೆಂಟರ್​ಗಳಲ್ಲಿ ಬಳಕೆಯಾಗುವ ಈ ಸರ್ವರ್​ಗಳಿಗೆ ವಿಪರೀತ ಬೇಡಿಕೆ ಇದ್ದು ಬೇರೆ ಬೇರೆ ದೇಶಗಳಿಗೆ ರಫ್ತು ಕೂಡ ಮಾಡುವುದಾಗಿ ಕಂಪನಿಯವರು ಹೇಳಿದ್ದು, ಅದಕ್ಕೆ ಪೂರ್ಣ ಸಹಕಾರ ನೀಡಲಾಗುವುದು. ಸಹಾಯಧನ ಇತ್ಯಾದಿ ವಿಚಾರಗಳ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಲು ಪ್ರಧಾನ ಕಾರ್ಯದರ್ಶಿ ಅವರಿಗೆ ಸಚಿವರು ಸೂಚಿಸಿದರು.

ಬುರ್ಕಾನ್ ಸಮೂಹವು ಅತ್ಯಾಧುನಿಕ ಸಿಪಿಯು, ಜಿಪಿಯು, ಎಐ-ರೆಡಿ ನೆಟ್​ವರ್ಕ್ ಸ್ವಿಚ್ ಉತ್ಪಾದನೆ ಆರಂಭಿಸುವುದಕ್ಕೂ ಬಯಸಿದೆ. ಇದಕ್ಕಾಗಿ ಅದು ಜಾಗತಿಕ ಮಟ್ಟದಲ್ಲಿ ತನ್ನ ತಾಂತ್ರಿಕ ಪಾಲುದಾರ ಕಂಪನಿಗಳಾದ ಸೂಪರ್-ಮೈಕ್ರೋ, ಗಿಗಾಬೈಟ್ ಮತ್ತು ಸೆರಾ ನೆಟ್​ವರ್ಕ್ ಜತೆ ರಾಜ್ಯದಲ್ಲಿ ಬಂಡವಾಳ ಹೂಡಲು ಬಯಸಿದೆ. ಸರಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಸಚಿವರು ತಿಳಿಸಿದರು.

ಬುರ್ಕಾನ್ ಕಂಪನಿಯ ಹೂಡಿಕೆಯಿಂದ ಸೆಮಿಕಂಡಕ್ಟರ್, ಎಐ ಹಾರ್ಡ್-ವೇರ್ ಮತ್ತು ಆಧುನಿಕ ಎಲೆಕ್ಟ್ರಾನಿಕ್ಸ್ ಕಾರ್ಯಪರಿಸರದ ಬಲವರ್ಧನೆಯಾಗಲಿದೆ. ಅದು ಉತ್ಪಾದನಾ ಪ್ರಕ್ರಿಯೆಯಲ್ಲಿ ರೆಸೊಲ್ಯೂಟ್ ಗ್ರೂಪ್ ಮತ್ತು ಕ್ವಾಡ್-ಜೆನ್ ಕಂಪನಿಗಳ ಸಹಯೋಗ ಹೊಂದಲು ಬಯಸಿದೆ. ಇದರಿಂದ ಸ್ಥಳೀಯವಾಗಿಯೇ ಆರ್ & ಡಿ ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ, ಶಿಕ್ಷಣ ಸಂಸ್ಥೆಗಳು ಮತ್ತು ಇಲ್ಲಿಯ ಕೈಗಾರಿಕೆಗಳೊಂದಿಗೆ ಸಹಭಾಗಿತ್ವ ಕೈಗೂಡಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಭಾರತ ಮತ್ತು ಇಎಂಇಎ ವಲಯಗಳಲ್ಲಿ ಕಂಪನಿಯು ಒದಗಿಸಲಿರುವ ಸೇವೆಗಳಿಗೆ ಬೆಂಗಳೂರನ್ನು ಉತ್ಕೃಷ್ಟತಾ ಕೇಂದ್ರವನ್ನಾಗಿ ಮಾಡಿಕೊಳ್ಳಲಿದೆ. ಜತೆಗೆ ರಾಜ್ಯಾದ್ಯಂತ ವಿಶೇಷ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಒಟ್ಟಾರೆಯಾಗಿ ಅದು ನಮ್ಮೊಂದಿಗೆ ಬೃಹತ್ ಕೈಗಾರಿಕೆ, ಐಟಿ-ಬಿಟಿ ಮತ್ತು ಇಎಸ್​ಡಿಎಂ ಕ್ಷೇತ್ರಗಳಲ್ಲಿ ಪಾಲುದಾರಿಕೆಯ ಅವಕಾಶಗಳನ್ನು ಪರಿಶೀಲಿಸುತ್ತಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

 

Share This Article
error: Content is protected !!
";