ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ವಿಷನ್ ದಾವಣಗೆರೆ” ಯೋಜನೆಯಡಿ ಮಧ್ಯ ಕರ್ನಾಟಕದ ತಂತ್ರಜ್ಞಾನ ಮತ್ತು ನವೀನತಾ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ, STPI ಸ್ಥಾಪನೆಗಾಗಿ ಈಗಾಗಲೇ 2 ಎಕರೆ ಭೂಮಿ ಮೀಸಲಿಡಲಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಶಾಶ್ವತ STPI ಇಂಕ್ಯುಬೇಶನ್ ಸೆಂಟರ್ ಮೂಲಕ ಸ್ಟಾರ್ಟ್ಅಪ್ಗಳು, ಉದ್ಯೋಗ ಸೃಷ್ಟಿ ಮತ್ತು ಉತ್ಪನ್ನ ಅಭಿವೃದ್ಧಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಜೊತೆಗೆ, ಹೆಚ್ಚುವರಿ 2 ಎಕರೆ ಭೂಮಿಯಲ್ಲಿ ಡೇಟಾ ಸೆಂಟರ್ ಸ್ಥಾಪನೆಯ ಮೂಲಕ ಸೆಮಿಕಂಡಕ್ಟರ್ ಹಾಗೂ ಕೃತಕ ಬುದ್ಧಿಮತ್ತೆ (AI) ಸಂಶೋಧನೆಗೆ ಬೆಂಬಲ ನೀಡುವ ಉದ್ದೇಶವಿದೆ. ದಾವಣಗೆರೆಯಲ್ಲಿರುವ ಹಲವು ವೈದ್ಯಕೀಯ ಕಾಲೇಜುಗಳನ್ನು ಗಮನದಲ್ಲಿಟ್ಟುಕೊಂಡು, ಡಿಜಿಟಲ್ ಹೆಲ್ತ್ ಮತ್ತು ವೈದ್ಯಕೀಯ ಸಂಶೋಧನೆಗಾಗಿ ಆರೋಗ್ಯ ಕ್ಷೇತ್ರದ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಯ ಬೇಡಿಕೆಯೂ ಇದೆ.
ಈ ಮೂರು ಪ್ರಮುಖ ಯೋಜನೆಗಳಿಗೆ 40 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ವಿನಂತಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.

