![](https://www.chandravallinews.com/wp-content/uploads/2024/05/WhatsApp-Image-2024-05-31-at-6.50.12-PM.jpeg)
i
ಉಚ್ಚಾಟಿತ ಜೆಡಿಎಸ್ಸಂಸದ, ಅಶ್ಲೀಯ ವಿಡಿಯೋ ಪ್ರಕರಣ ಆರೋಪಿ ಪ್ರಜ್ವಲ್ ರೇವಣ್ಣ ಬಂಧನ..
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಾಸನದ ಉಚ್ಚಾಟಿತ ಜೆಡಿಎಸ್ಸಂಸದ, ಅಶ್ಲೀಯ ವಿಡಿಯೋ ಪ್ರಕರಣ ಆರೋಪಿ ಪ್ರಜ್ವಲ್ ರೇವಣ್ಣ ಬರೋಬ್ಬರಿ 35 ದಿನಗಳ ಕಾಲ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದು ಅಂತಿಮವಾಗಿ ಬೆಂಗಳೂರಿಗೆ ವಾಪಸಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಜರ್ಮನಿಯ ಮೂನಿಕ್ ನಗರದಿಂದ ಲುಫ್ತಾನ್ಸ್ ಏರ್ ಲೈನ್ಸ್ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ಪ್ರಜ್ವಲ್ ರೇವಣ್ಣರನ್ನು ಬಂಧಿಸಲು ಎಸ್ಐಟಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿತ್ತು.ಪ್ರಜ್ವಲ್ ರೇವಣ್ಣ ಆಗಮನ ಹಿನ್ನಲೆಯಲ್ಲಿ ಟರ್ಮಿನಲ್ –2 ಗೇಟ್ ಬಳಿ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೂಡ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು. ಬಿಗಿ ಬಂದೋಬಸ್ತ್ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಿಐಡಿ ಕಚೇರಿ ಬಳಿ ಕೂಡ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಐಡಿ ಕಚೇರಿ ಮುಂದೆ ಬ್ಯಾರಿಕೇಡ್ ಹಾಕಲಾಗಿದ್ದು, 50ಕ್ಕೂ ಹೆಚ್ಚಿನ ಪೊಲೀಸರು ಕಾವಲಿದ್ದಾರೆ.ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದ ನಂತರ ಅವರ ಬಂಧನಕ್ಕಾಗಿ ಲುಕ್ಔಟ್ ನೋಟಿಸ್ ಹೊರಡಿಸಿದ್ದರಿಂದ ಇಮಿಗ್ರೇಷನ್ ಅಧಿಕಾರಿಗಳು ಮೊದಲು ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆದರು. ಬಳಿಕ ಎಸ್ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಜೆಡಿಎಸ್ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಶುಕ್ರವಾರ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಕರೆತಂದು ವಿಚಾರಣೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಮಹಿಳಾ ಪೊಲೀಸ್ ಅಧಿಕಾರಿ ಸುಮನ್ ಡಿ ಪೆನ್ನೇಕರ್ ಮತ್ತು ಎಸ್ ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರುಪಡಿಸಿದರು. ಇದಕ್ಕೂ ಮೊದಲು ಬಿಗಿ ಭದ್ರತೆಯಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಸಂಪೂರ್ಣವಾಗಿ ವೈದ್ಯಕೀಯ ತಪಾಸಣೆ ಮಾಡಲಾಯಿತು.ಮಹಿಳಾ ಪೊಲೀಸ್ ಅಧಿಕಾರಿಗಳ ಬೆಂಗಾವಲಿನಲ್ಲಿ ಅವರನ್ನು ಇಲ್ಲಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಜ್ವಲ್ ವಿರುದ್ಧ ಇದುವರೆಗೆ ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಪ್ರಾಥಮಿಕವಾಗಿ ದೇಹದ ತೂಕ, ಬಣ್ಣ, ಮಧುಮೇಹ, ಬಿಪಿ, ರಕ್ತದ ಮಾದರಿ, ಮೂತ್ರ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದು ಬಂಧನ ಸಂದರ್ಭದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಪ್ರಜ್ವಲ್ ರೇವಣ್ಣ ಆರೋಗ್ಯ ಸ್ಥಿತಿಯ ಬಗ್ಗೆ ತಪಾಸಣೆ ಮಾಡಲಾಗಿದೆ.