i
ನಕ್ಷತ್ರ ಆಮೆಗಳನ್ನ ಹಿಡಿಯುತ್ತಿದ್ದ ನಾಲ್ವರ ಬಂಧನ
ಚಂದ್ರವಳ್ಳಿನ್ಯೂಸ್, ಹೊಸದುರ್ಗ:
ಮತ್ತೋಡು ಹೋಬಳಿಯ ಕಂಚೀನಗರ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ನಕ್ಷತ್ರ ಆಮೆಗಳನ್ನು ಹಿಡಿಯುತ್ತಿದ್ದ ತಂಡದ ಮೇಲೆ ಶ್ರೀರಾಂಪುರ ಪೊಲೀಸರು ದಾಳಿ ನಡೆಸಿ, ಘಟನೆಗೆ ಸಂಬಂಧಿಸಿದ ನಕ್ಷತ್ರ ಆಮೆಗಳು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.ತಾಲೂಕಿನ ಕಂಚೀನಗರ ಗ್ರಾಮದ ಹೊರ ವಲಯದಲ್ಲಿ ವಾಹನವನ್ನು ನಿಲ್ಲಿಸಿಕೊಂಡು ಅನುಮಾನಸ್ಪದವಾಗಿ ಓಡಾಡುತ್ತಿದ್ದ ಅಪರಿಚಿತರನ್ನು ಗಮನಿಸಿದ ಸ್ಥಳಿಯರು ಶ್ರೀರಾಂಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನೆಡೆಸಿದ ಶ್ರೀರಾಂಪುರ ಪೊಲೀಸರು ನಕ್ಷತ್ರ ಆಮೆಗಳನ್ನು ಬೇಟೆಯಾಡುತ್ತಿದ್ದವರನ್ನು ಪತ್ತೆ ಹಚ್ಚಿದ್ದಾರೆ. ಬೇಟೆಗಾರರಿಂದ ೩೫ ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡು ಚಿಕ್ಕಬಳ್ಳಾಪುರ ಮೂಲದ ೩ ಜನ ಹಾಗೂ ಕೋಲಾರ ಮೂಲದ ಒಬ್ಬ ಒಟ್ಟು ನಾಲ್ಕು ಜನರನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಬಗ್ಗೆ ವಲಯ ಅರಣ್ಯಧಿಕಾರಿ ಸುನಿಲ್ ಕುಮಾರ್ ಪ್ರತಿಕ್ರಿಯಿಸಿ, ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಈ ನಕ್ಷತ್ರ ಆಮೆಗಳಿದ್ದು ಅಳಿವಿನ ಅಂಚಿನಲ್ಲಿವೆ ಇವುಗಳನ್ನು ವಿಷ್ಣುವಿನ ವಾಹನಗಳು ಎಂಬ ನಂಬಿಕೆ ನಮ್ಮ ಜನರಲ್ಲಿದ್ದು ಅವುಗಳನ್ನು ಮನೆಯಲ್ಲಿ ಪೂಜಿಸಿದರೆ ಒಳ್ಳೆಯದಾಗುವುದೆಂಬ ನಂಬಿಕೆ ಇರುವುದರಿಂದ ಇವುಗಳಿಗೆ ಹೆಚ್ಚಿನ ಬೇಡಿಕೆ ಇದೆ ಹಾಗಾಗಿ. ಇವುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. ಈ ಪ್ರಭೇದದ ಪ್ರಾಣಿಗಳು ಅಳಿವಿನ ಅಂಚಿನಲ್ಲಿರುವುದರಿಂದ ಇವುಗಳನ್ನು ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ ಎಂದರು.