![](https://www.chandravallinews.com/wp-content/uploads/2024/06/WhatsApp-Image-2024-06-25-at-10.26.26-PM-2-1024x559.jpeg)
i
ಪೆಟ್ರೋಲ್, ಡೀಸೆಲ್ ನಂತರ ಹಾಲಿನ ದರ ಹೆಚ್ಚಳ..
ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ. ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಇದೇ ವೇಳೆ, 1 ಲೀಟರ್ ಹಾಲಿನ ಜತೆ 50 ಎಂಎಲ್ ಹೆಚ್ಚುವರಿಹಾಲು ನೀಡಲು ನಿರ್ಧರಿಸಲಾಗಿದೆ. ಪರಿಷ್ಕೃತ ದರ ನಾಳೆ(ಜೂ. 26)ಯಿಂದಲೇ ಜಾರಿಗೆ ಬರಲಿದೆ.
ಹಾಲಿನ ದರ ಹೆಚ್ಚಳದ ಬಗ್ಗೆ ಕರ್ನಾಟಕ ಸಹಕಾರ ಉತ್ಪಾದಕ ಮಹಾಮಂಡಳ ನಿಯಮಿತವು ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ರಾಜ್ಯದ 27 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲು ಖರೀದಿಸಿ, ಸಂಸ್ಕರಿಸಿ, ‘ಗೋವಿನಿಂದ ಗ್ರಾಹಕರವರೆಗೆ‘ ಎಂಬ ಶೀರ್ಷಿಕೆಯನ್ನು ಹೊತ್ತು ‘ನಂದಿನಿ‘ ಬ್ರ್ಯಾಂಡ್ನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸುತ್ತಿದೆ.
ಪ್ರಸ್ತುತ ಸುದ್ದಿ ಕಾಲವಾಗಿರುವುದರಿಂದ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲಿನ ಶೇಖರಣೆಯು ಪ್ರತಿ ದಿನ ಹೆಚ್ಚಾಗುತ್ತಿದ್ದು, ಪ್ರಸ್ತುತ ಶೇಖರಣೆಯೂ ಒಂದು ಕೋಟಿ ಲೀಟರ್ಗಳ ಹತ್ತಿರ ತಲುಪಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಪ್ರತಿ ಅರ್ಧ ಲೀಟರ್ (500 ಎಂಎಲ್) ಮತ್ತು ಒಂದು ಲೀಟರ್ (1000 ಎಂಎಲ್) ಪ್ಯಾಕೆಟ್ಗಳಿಗೆ ಮಾತ್ರ 50 ಮಿಲಿ ಲೀಟರ್ ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ಪ್ರತಿ ಪ್ಯಾಕೆಟ್ಗಳ ದರವನ್ನು 2 ರೂಪಾಯಿಯಂತೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಕೆಎಂಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಎಂಎಫ್ ಅಧ್ಯಕ್ಷರ ಸಮರ್ಥನೆ: ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಇಂದು ಮಾಧ್ಯಮಗೋಷ್ಟಿ ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿ, ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು. ಪ್ರಸ್ತುತ ಲೀಟರ್ ಹಾಲಿಗೆ 42 ರೂ. ಇದ್ದು, ಇದಕ್ಕೆ 2 ರೂ. ಹೆಚ್ಚಳ ಮಾಡಲಾಗುವುದು. ಈ ಪರಿಷ್ಕೃತ ದರಗಳು ಹಾಲಿಗೆ ಮಾತ್ರ ಅನ್ವಯವಾಗಲಿದೆ. ನಂದಿನಿಯ ಉತ್ಪನ್ನಗಳಾದ ಮೊಸರು, ಲಸ್ಸಿ, ಇತರ ಉತ್ಪನ್ನಗಳಲ್ಲಿ ಏರಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮೊಸರು, ಲಸ್ಸಿ, ಇತರ ಉತ್ಪನ್ನದ ಬೆಲೆ ಏರಿಕೆ ಇಲ್ಲ: ಇದೇ ವೇಳೆ, ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರೂಪಾಯಿ ಇದೆ. ಗುಜರಾತ್ನಲ್ಲಿ ಅಮುಲ್ ಒಂದು ಲೀಟರ್ಗೆ 56 ರೂ., ಮಹಾರಾಷ್ಟ್ರದಲ್ಲಿ 56 ರೂ., ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ 16 ರೂ. ಕಡಿಮೆ ಇದೆ ಎಂದು ಎಂದು ಭೀಮಾ ನಾಯ್ಕ್ ಸಮರ್ಥಿಸಿಕೊಂಡರು.