![](https://www.chandravallinews.com/wp-content/uploads/2024/06/WhatsApp-Image-2024-06-26-at-8.02.31-PM-2-1024x483.jpeg)
i
ಜಿಲ್ಲೆಯಲ್ಲಿ 193 ಬಾಲ್ಯ ವಿವಾಹ ಪ್ರಕರಣಗಳು ಪತ್ತೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಬಾಲಕಿಯರ ಮಾಹಿತಿಯನ್ನು ಪಡೆದು, ಶಾಲೆಯಿಂದ ಹೊರಗುಳಿದ ಬಾಲಕಿಯರನ್ನು ಮುಖ್ಯವಾಹಿನಿಗೆ ತರಲು ಹಾಗೂ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ 2023-24ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಆರು ತಾಲ್ಲೂಕುಗಳ ಅಂಗನವಾಡಿಗಳಿಗೆ ಖುದ್ದಾಗಿ ಭೇಟಿ ನೀಡಬೇಕು. ಶಿಕ್ಷಣ ಇಲಾಖೆಯಿಂದ ಶಾಲೆಯಿಂದ ಹೊರಗುಳಿದ ಬಾಲಕಿಯರ ಮಾಹಿತಿಯನ್ನು ಪಡೆದು, ಶಾಲೆಯಿಂದ ಹೊರಗುಳಿದ ಬಾಲಕಿಯರನ್ನು ಮುಖ್ಯವಾಹಿನಿಗೆ ಕರೆತರಲು ಶ್ರಮಿಸಬೇಕು. ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂಗನವಾಡಿಗಳಿಗೆ, ಸೂಪರ್ವೈಸರ್ಗಳಿಗೆ ಜವಾಬ್ದಾರಿ ನಿಗದಿ ಮಾಡಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 193 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 102 ತಡೆಯಲಾಗಿದ್ದು, 91 ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. 11 ರಿಂದ 18 ವರ್ಷದ 154 ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳನ್ನು ಗುರುತಿಸಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಕಾನೂನಿನನ್ವಯ ಬಾಲ್ಯ ವಿವಾಹಕ್ಕೆ ಕಾರಣಕರ್ತರಾಗುವ ಪುರೋಹಿತರು, ಕಲ್ಯಾಣ ಮಂಟಪದವರು, ಕೆಟರಿಂಗ್, ಶಾಮಿಯಾನ ಸೇರಿದಂತೆ, ಪಾಲ್ಗೊಂಡ ಎಲ್ಲರ ಮೇಲೂ ಮೊಕದ್ದಮೆ ದಾಖಲಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಚಿತ್ರದುರ್ಗ ಜಿಲ್ಲಾ ಕೇಂದ್ರದ ನಗರದ ಬಿ.ಡಿ.ರಸ್ತೆಯನ್ನು ಪ್ರಥಮಾಧ್ಯತೆ ಮೇರೆಗೆ ಅಗಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು.
ಯಾರಾದರೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರೆ ಅದನ್ನು ಕೂಡಲೆ ತೆರವುಗೊಳಿಸಲು ಕ್ರಮವಹಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ, ಜಿಲ್ಲಾ ಕೇಂದ್ರದ ಮುಖ್ಯ ರಸ್ತೆಯನ್ನು ಅಗಲೀಕರಣಕ್ಕೆ ತ್ವರಿತವಾಗಿ ಅಗತ್ಯ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ಬರುವವರು ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ಕಳೆದ 29 ವರ್ಷದಿಂದ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಲು ಸಾಧ್ಯವಿಲ್ಲ. ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದ ಶಾಸಕರು, ಹೊಳಲ್ಕೆರೆಯಲ್ಲಿ ಯಾರ ಮುಲಾಜಿಗೂ ಒಳಗಾಗದೇ ರಸ್ತೆ ಅಗಲೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ವೀರೇಂದ್ರ ಪಪ್ಪಿ ಮಾತನಾಡಿ, ಜೆಸಿಆರ್ ರಸ್ತೆ, ಎಸ್ಬಿಐ ಬ್ಯಾಂಕ್ನಿಂದ ಗಾಂಧಿ ಸರ್ಕಲ್ವರೆಗಿನ ಮಾರ್ಗದಲ್ಲಿ ಸ್ಕೈವಾಕ್ಗೆ ಪ್ರಸ್ತಾವನೆ ಸಿದ್ದವಾಗುತ್ತಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಟಿ.ರಘುಮೂರ್ತಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆ ಅಗಲೀಕರಣಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿ:
ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಸಚಿವ ಡಿ.ಸುಧಾಕರ್ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಸೂಚನೆ ನೀಡಿದರು.
ಎಲ್ಲ ಕಡೆಯಿಂದಲೂ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೇಡಿಕೆ ಇದೆ. ಹಾಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಸುಸ್ಥಿತಿಯಲಿದ್ದು, ಕಾರ್ಯಾರಂಭ ಮಾಡಬೇಕು. ಗ್ರಾಮೀಣ ಕುಡಿಯುವ ನೀರಿನ ಅಧಿಕಾರಿಗಳು ಹಾಗೂ ತಾ.ಪಂ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸಣ್ಣಪುಟ್ಟ ದುರಸ್ಥಿಯಿದ್ದಲ್ಲಿ ಪಂಚಾಯಿತಿ ಮಟ್ಟದಲ್ಲಿಯೇ ಆರ್.ಓ. ಘಟಕ ರಿಪೇರಿ ಮಾಡಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿರುವ ಆರ್.ಓ.ಘಟಕಗಳ ನಿರ್ವಹಣೆಗೆ ಒಂದೇ ಏಜೆನ್ಸಿ ನಿರ್ವಹಣೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಸಭೆಗೆ ಮಾಹಿತಿ ನೀಡಿದರು. ವಿದುಯುತ್ ಬಿಲ್ ಪಾವತಿಸಿರುವ, ಸುಸ್ಥಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಂಬಂಧಪಟ್ಟ ಏಜೆನ್ಸಿಯವರು ಗ್ರಾಮ ಪಂಚಾಯಿತಿಯವರಿಗೆ ಹಸ್ತಾಂತರ ಮಾಡಿದರೆ ಇಂತಹ ಆರ್.ಓ. ಘಟಕಗಳನ್ನು ಪಂಚಾಯಿತಿ ವತಿಯಿಂದಲೇ ನಿರ್ವಹಣೆ ಮಾಡಲು ಕ್ರಮವಹಿಸಲಾಗುವುದು ಎಂದು ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ತಿಳಿಸಿದರು.
ದೇವರ ಎತ್ತುಗಳಿಗೆ ಟ್ರಸ್ಟ್ ಮಾಡಿ ಅನುದಾನ ನೀಡಿ:
ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಚಿತ್ರದುರ್ಗ ತಾಲ್ಲೂಕುಗಳಲ್ಲಿ ದೇವರ ಎತ್ತುಗಳು ಹೆಚ್ಚಾಗಿವೆ. ಈ ದೇವರ ಎತ್ತುಗಳ ನಿರ್ವಹಣೆಗೆ ಟ್ರಸ್ಟ್ ರಚನೆ ಮಾಡಿ ಅನುದಾನ ನೀಡಲು ಕ್ರಮವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕಿ ಇಂದಿರಾಬಾಯಿ ಅವರಿಗೆ ಸೂಚನೆ ನೀಡಿದರು.
ದೇವರ ಎತ್ತುಗಳಿಗೆ ಟ್ರಸ್ಟ್ ಮಾಡಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಬೇಕು. ದೇವರ ಎತ್ತುಗಳಿಗೆ ಟ್ರಸ್ಟ್ ಮಾಡಿ ಅನುದಾನ ಬರವಂತೆ ಮಾಡಬೇಕು ಎಂದು ಸೂಚಿಸಿದರು.
ಸಿಸಿ ಕ್ಯಾಮೆರಾ ಸರಿಪಡಿಸಿ:
ಚಿತ್ರದುರ್ಗ ನಗರದಲ್ಲಿರುವ ಸಿಸಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಸಿ.ಸಿ.ಕ್ಯಾಮೆರಾಗಳನ್ನು ಕಳೆದ 4-5 ವರ್ಷದ ಹಿಂದೆ ಹಾಕಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲ. ಈ ಕುರಿತು ಕ್ರಮವಹಿಸಬೇಕು ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಅವರಿಗೆ ಸೂಚನೆ ನೀಡಿದರು.
ಚಿತ್ರದುರ್ಗ ನಗರದಲ್ಲಿರುವ ಸಿ.ಸಿ.ಕ್ಯಾಮೆರಾಗಳನ್ನು ಸರಿಪಡಿಸಿ, ನಗರಸಭೆ ವತಿಯಿಂದಲೇ ನಿರ್ವಹಣೆ ಮಾಡುತ್ತೇವೆ ಎಂದು ರೇಣುಕಾ ಸಭೆಗೆ ಮಾಹಿತಿ ನೀಡಿದರು.
ಹೊಸ ಮದ್ಯದಂಗಡಿಗೆ ಅನುಮತಿ ಬೇಡ :
ಚಿತ್ರದುರ್ಗ ಕ್ಷೇತ್ರದಲ್ಲಿ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಕೂಡಲೆ ಇದರ ಬಗ್ಗೆ ಅಬಕಾರ ಇಲಾಖೆ ಕ್ರಮ ಕೈಗೊಂಡು, ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ಬಂದ್ ಮಾಡಿಸಬೇಕು, ಅಲ್ಲದೆ ಹೊಸದಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಿಯೂ ಖಾಸಗಿ ಅಥವಾ ಎಂಎಸ್ಐಎಲ್ ಮದ್ಯದಂಗಡಿಗೆ ಹಾಗೂ ಸಿಎಲ್-7 ಗೂ ಕೂಡ ಅನುಮತಿ ನೀಡುವುದು ಬೇಡ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಅಬಕಾರ ಇಲಾಖೆ ಉಪ ಆಯುಕ್ತರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಎಂ.ಚಂದ್ರಪ್ಪ, ಎನ್.ವೈ.ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇರ್ಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಖಲಿಂ ಉಲ್ಲಾ, ರಂಗಸ್ವಾಮಿ, ದೀಪಿಕಾ, ಸತೀಶ್, ತಿಮ್ಮಯ್ಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.