![](https://www.chandravallinews.com/wp-content/uploads/2024/06/Poli-1.jpeg)
i
ನಿರ್ಮಿತಿ ಕೇಂದ್ರದ ಹಗರಣ ಸಿಓಡಿ ತನಿಖೆಗೆ ವಹಿಸಲು ಶಿಫಾರಸು
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಿರ್ಮಿತಿ ಕೇಂದ್ರದಲ್ಲಿ ಈ ಹಿಂದಿನ ಯೋಜನಾ ನಿರ್ದೇಶಕರ ಅವಧಿಯಲ್ಲಿ ಆಗಿರುವ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಸಿಒಡಿ ತನಿಖೆಗೆ ವಹಿಸಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ 2023-24ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿರ್ಮಿತಿ ಕೇಂದ್ರದ ಈಗಿನ ಯೋಜನಾ ನಿರ್ದೇಶಕ ಹರೀಶ್ ಮಾತನಾಡಿ, ನಿರ್ಮಿತಿ ಕೇಂದ್ರದ ಮೂಲಕ ಒಂದು ಸಾವಿರಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಹಿಂದಿನ ಅಧಿಕಾರಿಗಳ ಅವಧಿಯಲ್ಲಿ ಭೌತಿಕವಾಗಿ ನಡೆದಿರುವ ಕಾಮಗಾರಿ ಗಿಂತಲೂ ಹೆಚ್ಚಿನ ಹಣವನ್ನು ಪಾವತಿಸಿರುವುದು ಹಾಗೂ ಖರ್ಚು ಮಾಡಿರುವುದು ಕಂಡುಬಂದಿದೆ. ಈಗಾಗಲೆ ಈ ಕುರಿತ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಲಾಗಿದೆ ಎಂದರು. ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.