![](https://www.chandravallinews.com/wp-content/uploads/2024/06/arrec-1024x519.jpeg)
i
ಬಯಲು ಸೀಮೆ ಅಡಿಕೆಗೆ ಶೀಘ್ರ ಸಹಾಯಧನ-ಸಚಿವ ಸುಧಾಕರ್..
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆ ಸೇರಿದಂತೆ ಬಯಲು ಸೀಮೆಯಾದ್ಯಂತ ಬೆಳೆಯುವ ಅಡಿಕೆಗೂ ಶೀಘ್ರ ಸಹಾಯಧನ ನೀಡಲಾಗುತ್ತದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ 2023-24ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸ್ತುತ ಅಡಿಕೆ ಬೆಳೆಯನ್ನು ಬೆಳೆಯುತ್ತಿರುವ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಹನಿ ನೀರಾವರಿ ಘಟಕ ಅಳವಡಿಕೆಗೆ ಸಹಾಯಧನ ನೀಡಲಾಗುತ್ತಿದೆ. ಶೀಘ್ರದಲ್ಲಿಯೂ ಬಯಲುಸೀಮೆಯ ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರಿಗೂ ಸರ್ಕಾರದಿಂದ ಪ್ರೋತ್ಸಾಹ ಧನ ಹಾಗೂ ನರೇಗಾ ಯೋಜನೆಯಡಿ ನೆರವು ನೀಡುವ ಸಂಬಂಧ ಶೀಘ್ರದಲ್ಲಿಯೇ ಸಚಿವ ಸಂಪುಟದ ಅನುಮೋದನೆಯಾಗುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸಭೆಗೆ ಮಾಹಿತಿ ನೀಡಿದರು.