i
ವಿವಿ ಸಾಗರಕ್ಕೆ ಭದ್ರಾದಿಂದ ಅಕ್ಟೋಬರ್ ಗೆ ನೀರು ಹರಿಸಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬ ಮಾಡಿದರೆ ಗುತ್ತಿಗೆದಾರರನ್ನು ಬದಲಾಯಿಸಿ ತುರ್ತು ಕಾಮಗಾರಿ ಪೂರ್ಣಗೊಳಿಸಿ ಅಕ್ಟೋಬರ್ ವೇಳೆಗೆ ವಿವಿ ಸಾಗರಕ್ಕೆ ನೀರು ಹರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ 2023-24ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದು ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಸಂಬಂಧಪಟ್ಟ ಏಜೆನ್ಸಿಯವರು ಕಾಮಗಾರಿಯನ್ನು ತ್ವರಿತವಾಗಿ ಮಾಡುತ್ತಿಲ್ಲ. ಕಳೆದ ನಾಲ್ಕು ತಿಂಗಳಲ್ಲಿ ಕೇವಲ ಶೇ.8ರಷ್ಟು ಮಾತ್ರ ಕಾಮಗಾರಿ ಆಗಿದೆ. ಗುತ್ತಿಗೆದಾರರು ಸಹಕರಿಸುತ್ತಿಲ್ಲ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಾಶ್ ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಿ.ಜಿ.ಗೋವಿಂದಪ್ಪ, ಕಾಮಗಾರಿ ವಿಳಂಬ ಮಾಡುತ್ತಿರುವ ಏಜೆನ್ಸಿಯವರನ್ನು ಕಪ್ಪುಪಟ್ಟಿಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಸಂಸದರಾದ ಗೋವಿಂದ ಎಂ.ಕಾರಜೋಳ, ವಿ.ಸೋಮಣ್ಣ ಹಾಗೂ ಬಸವರಾಜ್ ಬೊಮ್ಮಾಯಿ ಅವರು ದೆಹಲಿಯಲ್ಲಿ ಮಂಗಳವಾರದಂದು ಸಭೆ ನಡೆಸಿ, ಭದ್ರಾ ಮೇಲ್ದಂಡೆ ಯೋಜನೆಯ ರೂ.5300 ಕೋಟಿ ಅನುದಾನ ಶೀಘ್ರ ಬಿಡುಗಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ ಎಂದರು.
ಆದರೆ ನೀವು ಭರವಸೆ ನೀಡಿದಂತೆ ಅಕ್ಟೋಬರ್-2 ರಿಂದ ವಿವಿ ಸಾಗರಕ್ಕೆ ನೀರು ಹರಿಸುವ ಕಾರ್ಯ ಮಾಡಬೇಕು ಎಂದು ತಾಕೀತು ಮಾಡಿದರು.