i
ನಿಗಮದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಲಿ-ನವೀನ್..
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ನೈತಿಕ ಹೊಣೆ ಹೊತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜೂ.೨೮ ರಂದು ಬಿಜೆಪಿ. ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಶಾಸಕರು, ಮಾಮಿ ಶಾಸಕರು, ಪಕ್ಷದ ಕಾರ್ಯಕರ್ತರು, ರಾಜ್ಯದಿಂದ ಅನೇಕ ಮುಖಂಡರು ಮುತ್ತಿಗೆಯಲ್ಲಿ ಭಾಗವಹಿಸಲಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಣ ಹಗರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ತನಿಖೆಯನ್ನು ಸಿಬಿಐ.ಗೆ ವಹಿಸಬೇಕೆಂದು ರಾಷ್ಟ್ರೀಕೃತ ಬ್ಯಾಂಕ್ಗಳು ಹೇಳಿದಾಗ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ನಾಗೇಂದ್ರರವರಿಂದ ರಾಜಿನಾಮೆ ಪಡೆದಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಇದರಲ್ಲಿ ನನ್ನದೇನು ಪಾತ್ರವಿಲ್ಲವೆಂದು ಬಣ್ಣ ಹಚ್ಚುತ್ತಿದ್ದಾರೆ. ಹೈದರಾಬಾದ್ನ ಬಾರ್ಗಳಲ್ಲಿ ಹಣ ಹರಿದಾಡುತ್ತಿದೆ. ಏಳುನೂರು ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಸತ್ಯಾಸತ್ಯತೆಯನ್ನು ಬಯಲಿಗೆಳೆದು ತನಿಖೆಯನ್ನು ಚುರುಕುಗೊಳಿಸುವಂತೆ ಒತ್ತಾಯಿಸಿದರು.ಬಡವರು, ಮಹಿಳೆಯರು, ವಿದ್ಯಾರ್ಥಿಗಳ ನೆರವಿಗೆ ಬಳಬೇಕಾಗಿದ್ದ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣವನ್ನು ಬೇರೆ ಬೇರೆ ಉದ್ದೇಶಗಳಿಗೆ ರಾಜ್ಯ ಸರ್ಕಾರ ಬಳಸಿರುವುದರಿಂದ ಜನರ ರಕ್ತ ಕುದಿಯುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಯಲ್ಲಿ ಜಿಲ್ಲೆಯ ಜನ ಸೇರಿದಂತೆ ದಾವಣಗೆರೆ, ಜಗಳೂರು, ಶಿರಾ, ಪಾವಗಡದಿಂದಲೂ ನಮ್ಮ ಕಾರ್ಯಕರ್ತರು ಪಾಲ್ಗೊಳ್ಳುವರು. ಕೇಂದ್ರ ಮತ್ತು ರಾಜ್ಯದ ಹಣವನ್ನು ಕಾಂಗ್ರೆಸ್ ಸರ್ಕಾರ ನುಂಗಿ ಹಾಕಿದೆ. ಹಗರಣಕ್ಕೆ ಸಂಬಂಧಿಸಿದಂತೆ ಒಬ್ಬರನ್ನು ಬಂಧಿಸಿಲ್ಲ. ತನಿಖೆ ಆಳಕ್ಕೆ ಇಳಿದಂತೆಲ್ಲಾ ಹಗರಣದಲ್ಲಿ ಒಬ್ಬೊಬ್ಬರೆ ಶಾಮೀಲಾಗಿರುವುದು ಬೆಳಕಿಗೆ ಬರುತ್ತಿದೆ ಎಂದರು.ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೇರ್ಲಗುಂಟೆ ಮಾತನಾಡಿ ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ೧೮೭ ಕೋಟಿ ರೂ.ಗಳ ಹಗರಣವಾಗಿದೆ. ರಾಜ್ಯ ಸರ್ಕಾರಕ್ಕೆ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದ ಹಣವೇ ಬೇಕಿತ್ತ. ೨೫ ಸಾವಿರ ಕೋಟಿ ರೂ.ಗಳನ್ನು ಕೊಳ್ಳೆ ಹೊಡೆದಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಟ್ಟಿ ಭಾಗ್ಯಗಳಿಗೆ ಬಳಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಯಾರು ಹೊಣೆ? ಎನ್ನುವುದನ್ನು ಪ್ರಶ್ನಿಸುವುದಕ್ಕಾಗಿಯೇ ಮದಕರಿನಾಯಕನ ನೆಲದಲ್ಲಿ ನಾಳೆ ಪ್ರತಿಭಟನೆ ಮಾಡುತ್ತಿದ್ದೇವೆ. ಕಾರ್ಯಕರ್ತರು ಹಾಗೂ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಬಿಜೆಪಿ ಮುಖಂಡ ಕುಮಾರಸ್ವಾಮಿ ಮಾತನಾಡಿ ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ೧೮೭ ಕೋಟಿ ರೂ. ಅವ್ಯವಹಾರವಾಗಿದ್ದು, ನೆರೆಯ ಆಂಧ್ರ ರಾಜ್ಯದ ಚುನಾವಣೆಗೆ ವರ್ಗಾಯಿಸಲಾಗಿದೆ. ಜೂ.೨೮ ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಸಂಬಂಧ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿರವರು ಜಿಲ್ಲೆಯ ಆರು ತಾಲ್ಲೂಕುಗಳಲ್ಲಿಯೂ ಸಭೆ ನಡೆಸಿ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅರಿವು ಮೂಡಿಸಿದ್ದಾರೆಂದು ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸಿ. ಹುನುಮಂತೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ.ಸುರೇಶ್ಸಿದ್ದಾಪುರ, ಪಿ.ಸಂಪತ್ಕುಮಾರ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಪಾಲಯ್ಯ, ಸೋಮೇಂದ್ರ, ಕವನ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.