![](https://www.chandravallinews.com/wp-content/uploads/2024/06/WhatsApp-Image-2024-06-29-at-4.55.12-AM-2-1024x486.jpeg)
i
ಬ್ಯಾರಿಕೇಡ್ ಏರಿ ಡಿ.ಸಿ ಕಚೇರಿಗೆ ನುಗ್ಗಲು ಯತ್ನ..
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ ;
ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂದಾಳತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಬಂದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರನ್ನು ಹಿಮ್ಮೆಟ್ಟಿಸಿ ಮುತ್ತಿಗೆ ಯತ್ನ ವಿಫಲಗೊಳಿಸಿದ ಪೊಲೀಸರು ಕೆಲವರನ್ನು ಬಂಧಿಸಿ ಬಸ್ನಲ್ಲಿ ಕರೆದೊಯ್ದುರು.ಬೆಳಿಗ್ಗೆಯಿಂದಲೇ ಒನಕೆ ಓಬವ್ವ ವೃತ್ತದ ಸುತ್ತಲೂ ಬ್ಯಾರಿಕೇಡ್ಗಳನ್ನಿಟ್ಟು ಪೊಲೀಸರು ಸರ್ಪಗಾವಲಾಗಿ ನಿಂತಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಹೋಗುವವರನ್ನು ತಡೆದು ಪ್ರಶ್ನಿಸಿ ಹಿಂದಕ್ಕೆ ಕಳಿಸುತ್ತಿದ್ದರು. ಟೌನ್ ಕೋ-ಆಪರೇಟಿವ್ ಸೊಸೈಟಿ ಮುಂಭಾಗ, ವಾಸವಿ ಸರ್ಕಲ್, ಡಿ.ಸಿ.ಸಿ.ಬ್ಯಾಂಕ್ ಎದುರು, ಜಿಲ್ಲಾಧಿಕಾರಿ ಬಂಗಲೇ ಮುಂಭಾಗ ಡಿ.ಸಿ.ಕಚೇರಿ ಎದುರು ಬ್ಯಾರಿಕೇಡ್ಗಳನ್ನಿಟ್ಟು ಪೊಲೀಸರು ಕಾವಲು ಕಾಯುತ್ತಿದ್ದರು. ಇಷ್ಟೆಲ್ಲದರ ನಡುವೆ ಕೆಲವರು ಚಾಲುಕ್ಯ ಹೋಟೆಲ್ ಮುಂಭಾಗ ಟೈರ್ಗೆ ಬೆಂಕಿ ಹಚ್ಚಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.ಮದಕರಿನಾಯಕ ಪ್ರತಿಮೆ ಮುಂಭಾಗದಿಂದ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಧಾವಿಸಿದ ಬಿಜೆಪಿ. ಮುಖಂಡರು, ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಇಪ್ಪತ್ತು ನಿಮಿಷಗಳಿಗೂ ಹೆಚ್ಚು ಕಾಲ ನೂಕಾಟ, ತಳ್ಳಾಟವಾಯಿತು. ತೋಳ್ಬಲದ ಶಕ್ತಿಯನ್ನೆಲ್ಲಾ ಬಳಸಿದ ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳು ಬಿಜೆಪಿ.ಯವರಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಆಸ್ಪದ ಕೊಡಲಿಲ್ಲ. ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸಿ.ಹನುಮಂತೆಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ಯಾದವ್ ಇವರುಗಳು ಬ್ಯಾರಿಕೇಡ್ಗಳನ್ನು ಏರಿ ಡಿ.ಸಿ ಕಚೇರಿಗೆ ನುಗ್ಗಲು ಸಾಕಷ್ಟು ಕಸರತ್ತು ನಡೆಸಿದರೂ ಪೊಲೀಸರು ಅವಕಾಶ ಕೊಡಲಿಲ್ಲ. ಪ್ರತಿಭಟನಾಕಾರರ ಸಿಳ್ಳೆ, ಕೇಕೆ ಮುಗಿಲು ಮುಟ್ಟುವಂತಿತ್ತು. ನಾಲ್ಕು ಕೆ.ಎಸ್.ಆರ್.ಟಿ.ಸಿ. ಬಸ್, ಐದಕ್ಕೂ ಹೆಚ್ಚು ಪೊಲೀಸ್ ವ್ಯಾನ್, ಅಗ್ನಿಶಾಮಕ ವಾಹನ, ಅಂಬ್ಯುಲೆನ್ಸ್ ಇಷ್ಟೆಲ್ಲಾ ವಾಹನಗಳು ಒನಕೆ ಓಬವ್ವ ವೃತ್ತದ ಸುತ್ತಲೂ ನಿಂತಿದ್ದವು.