![](https://www.chandravallinews.com/wp-content/uploads/2024/06/WhatsApp-Image-2024-06-30-at-10.41.15-PM-1024x575.jpeg)
i
ಕಡಲು ನೋಡಲು ಹೋದವಳು: ಪುಸ್ತಕ ವಿಮರ್ಶೆ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಾನು ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ಒಂದು ವಿಭಿನ್ನ ರೀತಿಯ ಬರಹಗಳನ್ನು ಒಳಗೊಂಡ ಪುಸ್ತಕ ಫಾತಿಮಾ ರಲಿಯಾ ಅವರ ಕಡಲು ನೋಡಲು ಹೋದವಳು ಪುಸ್ತಕ.
ಈ ಪುಸ್ತಕದಲ್ಲಿ ಒಟ್ಟು 17 ವಿಭಿನ್ನ ರೀತಿಯ ಬರಹಗಳನ್ನು ಕಾಣಬಹುದು.
ಕಳೆದು ಹೋದ ಕೆಂಪಿಯ ಹುಡುಕಾಟದಲ್ಲಿ ಕಳೆದುಹೋದ ಆಪ್ತರನ್ನ ಸೇರುವ ತವಕ ಪುಸ್ತಕದ ಆರಂಭಕ್ಕೆ ಮುನ್ನುಡಿ ಬರೆದಂತಿದೆ.
ಮುಂದೆ ರತ್ನಕ್ಕ, ಫಕೀರಮ್ಮ, ಜೀನ್ಸ್ ಪ್ಯಾಂಟ್ ಅಕ್ಕ, ಬೇಬಿ ಅಣ್ಣ, ಪ್ರೀತಿ ಮದುವೆ, ಕಡಲ ಭೋರ್ಗರೆತ , ಐಸ್ ಕ್ಯಾಂಡಿ ತಿಮ್ಮಪ್ಪಣ್ಣ, ಏಕಾಂತದ ಬಾಗಿಲು ತಟ್ಟಿದವನು…ಹೀಗೆ ಒಂದೊಂದೇ ಕಥೆಗಳು ತೆರೆದುಕೊಳ್ಳುತ್ತವೆ…
ಜಾತಿ, ಅಸ್ಪೃಶ್ಯತೆ, ಧರ್ಮ, ಸಿದ್ಧಾಂತ, ವ್ಯಕ್ತಿಯಾಧಾರಿತ ಸಂಘರ್ಷಗಳ ಒಟ್ಟು ಕಥಾಹಂದರ ಕಡಲು ನೋಡಲು ಹೋದವಳು….ವಿಭಿನ್ನ ತಲೆ ಬರಹಗಳೊಂದಿಗೆ ಲೇಖಕಿ ಓದುಗರನ್ನು ತನ್ನತ್ತ ಸೆಳೆದಿದ್ದಾರೆ..
ಖಾಲಿತನವೆನಿಸಿದಾಗ ಕಡಲ ತೀರದಲ್ಲಿ ಕುಳಿತು ಸಮುದ್ರ ನೋಡಿ ಮನಸ್ಸನ್ನು ತಿಳಿಗೊಳಿಸಿಕೊಳ್ಳುವ ಲೇಖಕಿ ಕರಾವಳಿ ಮತ್ತು ಕಡಲ ವರ್ಣನೆಯನ್ನ ಓದುಗರ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.
ಫಾತಿಮಾ ರಲಿಯ ಅವರು ಬದುಕಿನ ಪ್ರತಿ ಕಾಲಘಟ್ಟವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದಾರೆನ್ನಲು ಈ ಪುಸ್ತಕವೇ ಸಾಕ್ಷಿಯಾಗಿದೆ..
ಕಥೆ ಕಾದಂಬರಿಗಳಂತೇ ಒಂದೇ ಕಥೆಗಳಿಲ್ಲದೇ ಭಾವನಾತ್ಮಕ ಸಂಬಂಧ, ಬದುಕು, ವ್ಯಕ್ತಿತ್ವ, ಕರಾವಳಿ , ರಾಜಕೀಯ, ಸಂಸ್ಕೃತಿ ಹೀಗೆ ವಿವಿಧ ರೂಪಗಳಲ್ಲಿ ಪುಸ್ತಕ ವಿಭಿನ್ನವಾಗಿ ನಿಂತಿದೆ.
ಧರ್ಮವು ಒಡ್ಡುವ ಹಲವು ಸವಾಲುಗಳಿಗೆ , ಪ್ರಶ್ನೆಗಳಿಗೆ ಉತ್ತರಿಸುವ ಗುಣ , ಧರ್ಮದ ಚೌಕಟ್ಟನ್ನು ದಾಟಿ ಬದುಕನ್ನು ನೋಡುವ ಧೈರ್ಯ, ಆತ್ಮ ವಿಶ್ವಾಸ ಇವರಲ್ಲಿದೆ ಎನ್ನುವುದು ಈ ಪುಸ್ತಕದೊಂದಿಗೆ ಸಾಬಿತಾದಂತಿದೆ.
ರಕ್ತ ಸಂಬಂಧಗಳಷ್ಟೇ ಅಲ್ಲದೇ ಜೀವನದಲ್ಲಿ ಹೃದಯ ಸಂಬಂಧಗಳೂ ಬದುಕನ್ನ ಶ್ರೀಮಂತಗೊಳಿಸುತ್ತವೆ ಎಂದು ಪ್ರೀತಿ ,ಮದುವೆ ಮತ್ತು ಜೀನ್ಸ್ ಪ್ಯಾಂಟ್ ಅಕ್ಕನ ಬದುಕು ಎಂಬ ಬರಹ ದೊಂದಿಗೆ ತೋರಿಸಿಕೊಟ್ಟಿದ್ದಾರೆ ಫಾತೀಮಾ.
ಕಾಣದ ಕೈಗಳು ನಡೆಸುವ ಕುತಂತ್ರ, ಹಳ್ಳಿ ಜನರ ಅರಿವಿಗೆ ಬಾರದಂತೆ ರೂಪುಗೊಳ್ಳುವ ಸಂಘರ್ಷಗಳ ಬಗ್ಗೆ ಅಸಹಾಯಕ ಸನ್ನಿವೇಶವನ್ನು ಚಿತ್ರಿಸಲಾಗಿದೆ.
ಪುಸ್ತಕವನ್ನು ಓದಿ ಮುಗಿಸುತ್ತಿದ್ದಂತೆ ಕಣ್ಣಿಗೆ ಕಂಡದ್ದು,ಬೊಳುವಾರು ಮಹಮದ್ ಕುಂಞಿಯವರ ಬೆನ್ನುಡಿ. ‘ಜಗಿದಷ್ಟೋ ಸಿಹಿ ಎನ್ನಿಸುವ ಕಬ್ಬಿನ ಜಲ್ಲೆ ಎಂದಿರುವ ಅವರ ಮಾತು ನಿಜವೆನಿಸುತ್ತದೆ…
ಕಡಲು ನೋಡಲು ಹೋದವಳು ಪುಸ್ತಕ ಓದುಗರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡಿದೆ ಎನ್ನುವುದಕ್ಕೆ ಈ ಪುಸ್ತಕಕ್ಕೆ ಸಂದ ಲಂಕೇಶ್ ಪ್ರಶಸ್ತಿ ಹಾಗೂ ಅವ್ವ ಪ್ರಶಸ್ತಿಗಳೇ ನಿದರ್ಶನಗಳಾಗಿವೆ..
ಪುಸ್ತಕ ಪ್ರೇಮಿಗಳು ಕಥೆ, ಕಾದಂಬರಿ, ಕವನ ಸಂಕಲನ, ಜೀವನ ಚರಿತ್ರೆ ಹೊರತುಪಡಿಸಿ ವಿಭಿನ್ನ ಶೈಲಿಯ ಪುಸ್ತಕ ಓದಬೇಕೆನ್ನುವ ಹುಡುಕಾಟದಲ್ಲಿದ್ದರು ಈ ಪುಸ್ತಕವನ್ನ ಒಮ್ಮೆಯಾದರೂ ಓದಲೇಬೇಕು….
ಲೇಖಕರು : ಫಾತಿಮಾ ರಲಿಯಾ