208 ಗಂಭೀರ ಪ್ರಕರಣಗಳ ವಿಲೇವಾರಿ: ನಕಲಿ ಜಾತಿ ಪ್ರಮಾಣ ಪತ್ರಕ್ಕೆ ತಡೆ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಮುಂದೆ 3,688 ಪ್ರಕರಣಗಳ ವಿಚಾರಣೆ ಬಾಕಿ ಇದ್ದು
, ಮೂರು ತಿಂಗಳಲ್ಲಿ 208 ಗಂಭೀರ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ತ್ವರಿತ ನ್ಯಾಯದಾನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

- Advertisement - 

ಆಯೋಗದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ಸುಮಾರು ಮೂರೂವರೆ ತಿಂಗಳು ಕಳೆದಿದೆ. ಈ ಅವಧಿಯಲ್ಲಿ ರಾಜ್ಯದ 8 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕುಂದು ಕೊರತೆಗಳನ್ನು ಆಲಿಸಿ ಕಾನೂನಾತ್ಮಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಆಯೋಗಕ್ಕೆ ನ್ಯಾಯಾಂಗ ಅಧಿಕಾರವಿದ್ದು, ಅದಾಲತ್‌ಗಳ ಮೂಲಕ ಎಸ್.ಸಿ ಹಾಗೂ ಎಸ್.ಟಿ ಜನರಿಗೆ ಆಗುವ ತೊಂದರೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

10 ದಿನಗಳಲ್ಲಿ ಭೂಮಿ ವರದಿ ಸಲ್ಲಿಕೆಗೆ ಆದೇಶ:
ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಜನಸಂಖ್ಯೆ ಶೇ. 45 ರಿಂದ 50 ರಷ್ಟಿದ್ದು
, ಅನೇಕರಿಗೆ ಸ್ವಂತ ಭೂಮಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಭೂಮಿ ಮತ್ತು ಎಷ್ಟು ಕುಟುಂಬಗಳಿಗೆ ವಿತರಿಸಬಹುದು ಎಂಬ ಬಗ್ಗೆ ಸಂಪೂರ್ಣ ವರದಿಯನ್ನು 10 ದಿನಗಳೊಳಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ತಿಳಿಸಿದರು.

- Advertisement - 

ದೌರ್ಜನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ:
ದೌರ್ಜನ್ಯ ಮತ್ತು ಪೋಕ್ಸೋ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಬಾರದು. ಯಾವುದೇ ಕಾರಣಕ್ಕೂ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳು ಪಾರಾಗಬಾರದು. ಕಡ್ಡಾಯವಾಗಿ 60 ದಿನಗಳೊಳಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು ಎಂದು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ. ಎಸ್.ಸಿ.ಎಸ್‌ಪಿ ಹಾಗೂ ಟಿ.ಎಸ್.ಪಿ ಅನುದಾನದ ಹಣ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಇನ್ನು ಮುಂದೆ ಈ ಅನುದಾನದಡಿ ನಡೆಯುವ ಪ್ರತಿಯೊಂದು ಕಾಮಗಾರಿಯ ಸ್ಥಳದಲ್ಲಿ ಮಾಹಿತಿ ಫಲಕ ಅಳವಡಿಸುವುದು ಕಡ್ಡಾಯ. ಇದರಿಂದ ಜನರಿಗೆ ಅನುದಾನದ ಮೊತ್ತ ಮತ್ತು ಕಾಮಗಾರಿಯ ವಿವರ ತಿಳಿಯಲಿದೆ ಎಂದು ಡಾ.ಎಲ್.ಮೂರ್ತಿ ಹೇಳಿದರು.

ಶಿಕ್ಷಣ ದತ್ತ ವಿಶೇಷ ಗಮನ:
ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಗಣಿತ
, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಿಗೆ ವಿಶೇಷ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ವಸತಿ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆಗಳನ್ನು ಶೀಘ್ರದಲ್ಲೇ ಸರಿಪಡಿಸುವ ಭರವಸೆಯನ್ನು ಜಿಲ್ಲಾಧಿಕಾರಿ, ಸಿಇಓ ಹಾಗೂ ಅಪರ ಜಿಲ್ಲಾಧಿಕಾರಿಗಳು ನೀಡಿದ್ದಾರೆ ಎಂದು ಡಾ.ಎಲ್.ಮೂರ್ತಿ ತಿಳಿಸಿದರು.

 ನಕಲಿ ಜಾತಿ ಪ್ರಮಾಣ ಪತ್ರಕ್ಕೆ ತಡೆ:
ನಕಲಿ ಜಾತಿ ಪ್ರಮಾಣಪತ್ರ ಬಳಸಿ ಉದ್ಯೋಗ ಪಡೆಯುತ್ತಿರುವವರ ವಿರುದ್ಧ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸಲಾಗಿದೆ. ಈಗಾಗಲೇ ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಸರ್ಕಾರದ ಗಮನಕ್ಕೆ ತರಲಾಗಿದೆ. ಆಯೋಗಕ್ಕೆ ನ್ಯಾಯಾಂಗ ಅಧಿಕಾರವಿದ್ದು
, ಜನರ ಅಹವಾಲುಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಎಲ್.ಮೂರ್ತಿ ಹೇಳಿದರು.

ಕುಂದು ಕೊರತೆಗಳ ಆಲಿಕೆ ದೂರು ಸ್ವೀಕಾರ:
ಪತ್ರಿಕಾಗೋಷ್ಠಿಗೂ ಮುನ್ನ ಆಯೋಗದ ಅಧ್ಯಕ್ಷ ಡಾ.ಮೂರ್ತಿ.ಎಲ್ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮುಖಂಡರಿಂದ ಜಿಲ್ಲೆಯ ಪ್ರಮುಖ ಕುಂದು ಕೊರತೆಗಳನ್ನು ಆಲಿಸಿ
, ಸಂತ್ರಸ್ತರಿಂದ ದೂರು ಸ್ವೀಕರಿಸಿದರು.

ರಸ್ತೆ ಅಗಲಿಕರಣದ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕವಾಡಿಗರಹಟ್ಟಿಯಲ್ಲಿ ಪರಿಶಿಷ್ಟ ಜಾತಿಯ ಸುಮಾರು 56 ಕುಟುಂಬಗಳ ಮನೆ ತೆರವು ಮಾಡಿದ್ದು, ಜನರು ಬೀದಿಪಾಲು ಆಗಿದ್ದಾರೆ. ಕೂಡಲೇ ಸಂತ್ರಸ್ತರಿಗೆ ಮನೆಗಳನ್ನು ಮಂಜೂರು ಮಾಡಬೇಕು. ಚಿತ್ರದುರ್ಗ ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಾಬು ಜಗಜೀವನ್ ರಾಂ ಭವನ, ಮಾದಾರ ಚನ್ನಯ್ಯ ಸಭಾ ಭವನಗಳ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಅಪೂರ್ಣ ಕಟ್ಟಡಗಳು ಅನೈತಿಕ ಚಟುವಟಿಕೆ ತಾಣಗಳಾಗಿವೆ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಸಮಾಜ ಕಲ್ಯಾಣ ಇಲಾಖೆ ಕಚೇರಿ ನಿರ್ಮಿಸಬೇಕು. ಸಮುದಾಯಕ್ಕೆ ಮೀಸಲು ಇರುವ ಖಾಲಿ ಜಾಗಗಳನ್ನು ಪ್ರಭಾವಿಗಳು ಒತ್ತುವರಿ ಮಾಡದಂತೆ ಕ್ರಮ ವಹಿಸಬೇಕು.

ವಿನಾಕಾರಣ ಪೊಲೀಸರು ದಲಿತ ಹೋರಾಟಗಾರರ ಮೇಲೆ ತೆರೆದಿರುವ ರೌಡಿ ಶೀಟರ್ ಪ್ರಕರಣಗಳನ್ನು ರದ್ದು ಪಡಿಸಬೇಕು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಇಲ್ಲಿ ಗುಣಮಟ್ಟದ ಶಿಕ್ಷಣ ದೊರಕದೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪಲಿತಾಂಶದಲ್ಲಿ ಇಳಿಕೆಯಾಗುತ್ತಿದೆ. ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಗರದಲ್ಲಿ ಪೌರ ಕಾರ್ಮಿಕರಿಗಾಗಿ ನಿರ್ಮಿಸುತ್ತಿರು ವಸತಿ ಸಮುಚ್ಚಯಗಳ ಕಾಮಗಾರಿ ಕಳೆಪೆಯಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಈ ಸಂಬAದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಕಾನೂನು ಪದವಿ ಪೂರೈಸಿ ಪರಿಶಿಷ್ಟ ಜಾತಿ ಹಾಗೂ ಪಂಗಡದು ವಕೀಲಿ ವೃತ್ತಿ ಕೈಗೊಳ್ಳುವವರಿಗೆ ನೀಡುತ್ತಿರುವ ಭತ್ಯೆಯನ್ನು 2 ರಿಂದ 3 ವರ್ಷಕ್ಕೆ ಏರಿಸಬೇಕು. ಸದ್ಯ ನೀಡುತ್ತಿರುವ ರೂ.10,000 ಭತ್ಯೆ ಪ್ರತಿ ತಿಂಗಳು ಜಮೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಜನರಿಗೆ ನಿವೇಶನ ನೀಡಬೇಕು.

ನಿಗಮ ಮಂಡಳಿಗಳಿಗೆ ಕಡಿಮೆ ಗುರಿ ನಿಗದಿ ಮಾಡುತ್ತಿದ್ದು, ಇದರಿಂದ ಬಹಳಷ್ಟು ಫಲಾನುಭವಿಗಳಿಗೆ ಯೋಜನೆ ಲಾಭ ದೊರಕುತ್ತಿಲ್ಲ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ಜಿಲ್ಲೆಯ ಪ್ರತಿಗ್ರಾಮದಲ್ಲಿಯೂ ಸ್ಮಶಾನಕ್ಕೆ ಜಾಗ ಮಂಜೂರು ಮಾಡಬೇಕು. ಪಿ.ಟಿ.ಸಿ.ಎಲ್ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು. ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಬಾಲಕಿಯರ ರಕ್ಷಣೆಗೆ ಒತ್ತು ನೀಡಬೇಕು. ಬೊಮ್ಮನಕಟ್ಟೆಯಲ್ಲಿ ವಸತಿ ಶಾಲೆಯಲ್ಲಿ ಬಾಲಕಿಯ ಮೇಲೆ ಲೈಗಿಂಕ ದೌರ್ಜನ್ಯ ಎಸಗಿದ ಶಿಕ್ಷಕನ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಆಯೋಗದ ಅಧ್ಯಕ್ಷ ಡಾ.ಮೂರ್ತಿ.ಎಲ್ ಲಿಖತವಾಗಿ ದೂರುಗಳನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಕರ್ನಾಟಕ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾದ ಸುನೀಲ್ ಎಂ ಉಕ್ಕಲಿ, ಎಂ.ಕುAಬಯ್ಯ, ಕಾರ್ಯದರ್ಶಿ ಡಾ.ಹೆಚ್.ಎನ್.ಶಿವರಾಮು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ.ಸಿಇಓ ಡಾ.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಸೇರಿದಂತೆ ಮುಖಂಡರು ಇದ್ದರು.

Share This Article
error: Content is protected !!
";