ಯುವತಿಯರಿಗೆ 18, ಯುವಕರಿಗೆ 21 ವರ್ಷ ಮದುವೆ ವಯಸ್ಸುಕಡ್ಡಾಯ- ಡಾ. ರಂಜಿತಾ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣರಂಗಮ್ಮ ರವರು ಪ್ರಾಥಮಿಕ ಆರೋಗ್ಯ ಕೇಂದ್ರ ಯರಬಳ್ಳಿಗೆ ಭೇಟಿ ನೀಡಿ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ORS ಮತ್ತು Zinc ಬಳಕೆ ಬಗ್ಗೆ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಜಿಂಕ್(ಸತುವು) ಪ್ರಮುಖ ಪೋಷಕಾಂಶವಾಗಿದೆ ಮತ್ತು ಮಾನವನ ಆರೋಗ್ಯಕ್ಕೆ ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.

- Advertisement - 

ಸತುವು ಪೂರಕಗಳು ಮತ್ತು ಕೆಲವು ಔಷಧಗಳಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ, ಸತು ಸಲ್ಫೇಟ್ ಅನ್ನು ಅತಿಸಾರ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅಲ್ಲದೆ ಸತುವು ಆಕ್ಸೈಡ್ ಸನ್ ಸ್ಕ್ರೀನ್ ಗಳು ಮತ್ತು ಬೇಬಿ ಪೌಡರ್ ಗಳಲ್ಲಿ ಬಳಸಲಾಗುತ್ತದೆ ಎಂದು ಸಣ್ಣರಂಗಮ್ಮ ತಿಳಿಸಿದರು.

ಯರಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಂಜಿತಾ ಮಾತನಾಡಿ ಬಾಲ್ಯ ವಿವಾಹದ  ಪೋಕ್ಸೋ ಕಾಯಿದೆ ಕುರಿತು ಮಾಹಿತಿ ನೀಡಿ ಈ ಕಾಯಿದೆ ಬಾಲ್ಯ ವಿವಾಹ ಅಪರಾಧವೆಂದು ಪರಿಗಣಿಸಲಾಗಿದೆ ಮತ್ತು ಶಿಕ್ಷಾರ್ಹವಾಗಿದೆ ಎಂದು ವೈದ್ಯರು ಎಚ್ಚರಿಸಿದರು.

- Advertisement - 

ಹುಡುಗಿಯರಿಗೆ 18 ವರ್ಷ ಮತ್ತು ಹುಡುಗರಿಗೆ 21 ವರ್ಷ ಮದುವೆಗೆ ಕನಿಷ್ಠ ವಯಸ್ಸನ್ನು ನಿಗದಿಪಡಿಸಲಾಗಿದೆ. ಬಾಲ್ಯ ವಿವಾಹ ನಡೆಸುವ, ಪ್ರೋತ್ಸಾಹಿಸುವ ಅಥವಾ ಅನುಮತಿಸುವ ಯಾರಿಗಾದರೂ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದಾಗಿದೆ ಎಂದು ವೈದ್ಯೆ ರಂಜಿತಾ ಎಚ್ಚರಿಸಿದರು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯು ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುತ್ತದೆ ಮತ್ತು ಬಾಲ್ಯ ವಿವಾಹದ ಸಂದರ್ಭದಲ್ಲಿಯೂ ಸಹ ಅನ್ವಯಿಸುತ್ತದೆ. ಅಪ್ರಾಪ್ತ ವಯಸ್ಕರೊಂದಿಗೆ ಲೈಂಗಿಕ ಸಂಪರ್ಕವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ, ಅಪ್ರಾಪ್ತ ವಯಸ್ಕರ ಒಪ್ಪಿಗೆಯನ್ನು ಲೆಕ್ಕಿಸುವುದಿಲ್ಲ ಎಂದು ಅವರು ತಿಳಿಸಿದರು.

ಬಾಲ್ಯ ವಿವಾಹದ ಸಂದರ್ಭದಲ್ಲಿ, ಹುಡುಗಿಯರನ್ನು ಲೈಂಗಿಕ ದೌರ್ಜನ್ಯದ ಬಲಿಯಾದವರಾಗಿ ಪರಿಗಣಿಸಲಾಗುತ್ತದೆ ಮತ್ತು ಪೋಕ್ಸೋ ಕಾಯಿದೆಯಡಿ ರಕ್ಷಣೆ ನೀಡಲಾಗುತ್ತದೆ ಎಂದು ಡಾ.ರಂಜಿತಾ ತಿಳಿಸಿದರು.

ಸೀನಿಯರ್ ಪಿಹೆಚ್ ಸಿಒ ಶಿವಮ್ಮ ಅವರು ಗರ್ಭಿಣಿ ಮತ್ತು ಬಾಣಂತಿಯರ ಆರೋಗದ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಪಿಹೆಚ್ ಸಿಒ ಗಾಯಿತ್ರಿ
, ಕಾಳಮ್ಮ, ನಾಗವೇಣಿ, ಪ್ರಯೋಗಶಾಲಾ ತಂತ್ರಜ್ಞೆ ಮಾಲತಿ ಸಿಹೆಚ್ಒ ಶ್ರುತಿ ಮತ್ತು ಗುರುಶಾಂತಮ್ಮ ಹಾಗು ಹೆಚ್ಐಒ ಮತ್ತು ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

Share This Article
error: Content is protected !!
";