ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನರೇಗಾ ಯೋಜನೆ ಬಗ್ಗೆ ವಿಶೇಷ ಚರ್ಚೆ ನಡೆಯಬೇಕಾಗಿರುವುದರಿಂದ ಜನವರಿ 22 ರಿಂದ ಜನವರಿ 31ರ ವರೆಗೆ ಜಂಟಿ ಅಧಿವೇಶನ ನಡೆಯಲಿದೆ. ಅಧಿವೇಶನದ ವೇಳೆ ನರೇಗಾ ಕುರಿತು ಸಾಕಷ್ಟು ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಂಟಿ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರ ಭಾಷಣ ಮತ್ತು ಮನರೇಗಾ ಯೋಜನೆ ಬದಲಾವಣೆಯ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಅಧಿವೇಶನದ ನಂತರ ಆಯವ್ಯಯದ ಸಿದ್ಧತೆ ಪ್ರಾರಂಭಿಸಲಾಗುವುದು ಎಂದು ಸಿಎಂ ತಿಳಿಸಿದರು.
ಮುಂದುವರೆದು ಮಾತನಾಡಿ ಸಿಎಂ ಅವರು ಕಾಂಗ್ರೆಸ್ ವರಿಷ್ಠರು ಕರೆ ನೀಡಿದರೆ ನವದೆಹಲಿಗೆ ತೆರಳುವುದಾಗಿ ಇದೇ ವೇಳೆ ತಿಳಿಸಿದರು.
ಡಿಜಿಪಿ ರಾಮಚಂದ್ರರಾವ್ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ, ಅಮಾನತು ಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಈಗಾಗಲೇ ಸುದ್ದಿಗೋಷ್ಠಿ ಮಾಡಿ, ”ಜ.22 ರಿಂದ 31ರ ವರೆಗೆ ನಡೆಯಲಿರುವ ಜಂಟಿ ಅಧಿವೇಶನವನ್ನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲರಿಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ. ರಾಜ್ಯಪಾಲರು ಮಾಡಲಿರುವ ಭಾಷಣವನ್ನು ಅನುಮೋದಿಸಲು ಸಚಿವ ಸಂಪುಟವು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿದೆ ಎಂದಿದ್ದರು.
ವಿಬಿಜಿ ರಾಮ್ ಜಿ ಕಾಯ್ದೆಯ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಯಲಿದೆ. ನೂತನ ಕಾಯ್ದೆಯು ಸಮಾಜದ ಮೇಲೆ ಬೀರಿರುವ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಹಾಗೂ ಜಾಗೃತಿ ಮೂಡಿಸಲು ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಿ ನೂತನ ಕಾಯ್ದೆಯ ಕುರಿತು ನಿರ್ಣಯ ಕೈಗೊಳ್ಳಲು ಸಚಿವ ಸಂಪುಟ ಈಗಾಗಲೇ ನಿರ್ಣಯಿಸಿದೆ.
ಈ ಮೂಲಕ ಜನಹಿತ, ರಾಜ್ಯದ ಹಿತ ಕಾಪಾಡಲು ಸೂಕ್ತವಾದ ಹೆಜ್ಜೆಯನ್ನು ಸರ್ಕಾರ ಇಡಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ರಾಜ್ಯದ ಜನರ ಹಕ್ಕನ್ನು ಕಿತ್ತುಕೊಳ್ಳಲು ಮುಂದಾದರೆ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ಸರ್ಕಾರ ಅಧಿವೇಶನ ಕರೆಯದೇ ಬಿಡಲು ಸಾಧ್ಯವಿಲ್ಲ. ಅರಿವು ಹಾಗೂ ಜಾಗೃತಿ ಮೂಡಿಸಲು ಹಾಗೂ ಕೇಂದ್ರ ಸರ್ಕಾರದ ಮೇಲೆ ಮನರೇಗಾ ಕಾಯ್ದೆಯ ಮರುಸ್ಥಾಪನೆಗಾಗಿ ಒತ್ತಡ ತರಲಾಗುವುದು ಎಂದು ಹೇಳಿದ್ದರು.
ಮನರೇಗಾ ಹಾಗೂ ರಾಮ್ ಜಿ ಯೋಜನೆಗಳ ಇರುವ ವೈರುಧ್ಯಗಳ ಬಗ್ಗೆ ತಿಳಿಸಲು ಅಧಿವೇಶನದಲ್ಲಿ ನಡೆಯಲಿರುವ ವಿಶೇಷ ಚರ್ಚೆ ವೇಳೆ ಐವರು ಸಚಿವರಿಗೆ ಉಸ್ತುವಾರಿ ವಹಿಸಲಾಗಿದೆ. ಸಚಿವರಾದ ಕೃಷ್ಣ ಬೈರೇಗೌಡ, ಹೆಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಸೇರಿದಂತೆ ಐವರಿಗೆ ಹೆಚ್ಚು ಚರ್ಚೆಯಲ್ಲಿ ಭಾಗಿಯಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

