ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರ್ವಜನಿಕರಿಗೆ, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ವರ್ಷಕ್ಕೆ ಮೂರು ದಿನ ಸರ್ಕಾರದ ವತಿಯಿಂದ ಏರ್ಪಡಿಸಲಾಗುವುದು. ಇದಕ್ಕಾಗಿ 25 ಕೋಟಿ ರೂ. ಮೀಸಲಿಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬ್ರಿಗೇಡ್ ಫೌಂಡೇಶನ್ನಿಂದ ನವೀಕರಣಗೊಂಡ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಡಿಸೆಂಬರ್ ಕೊನೆ ವಾರದಲ್ಲಿ ಹೆಚ್ಚು ರಜೆಗಳು ಇರುತ್ತವೆ. ಇದರ ಬಗ್ಗೆ ರೂಪುರೇಷೆಗಳನ್ನು ಒಂದು ವಾರದಲ್ಲಿ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯುವ ಪೀಳಿಗೆಗೆ ನಮ್ಮ ಇತಿಹಾಸ ತಿಳಿಯಬೇಕು ಎಂದು ವಿಧಾನಸೌಧ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಚಿತ್ರಸಂತೆ, ಪುಸ್ತಕ ಮೇಳೆ ಆಯೋಜಿಸಲಾಗಿದೆ. ಈ ಮೂಲಕ ಬೆಂಗಳೂರಿಗೆ ಹೊಸ ರೀತಿಯ ರೂಪ ನೀಡಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಶಾಲೆಗೆ ಒಟ್ಟಿಗೆ ಕರೆದರೆ 30-40 ಸಾವಿರ ಜನರು ಬರುತ್ತಾರೆ. ಅದಕ್ಕಾಗಿ ಶಾಲೆಗಳ ನಡುವೆ ಮೊದಲು ಸ್ಪರ್ಧೆ ನಡೆಸಿ ನಂತರ ಅಂತಿಮ ಸ್ಪರ್ಧೆ ಏರ್ಪಡಿಸುವ ಬಗ್ಗೆ ಆಲೋಚನೆ ಮಾಡಲಾಗುವುದು. ಇದನ್ನು ಹೇಗೆ ರೂಪಿಸಬೇಕು ಎಂದು ಕಲಾವಿದರು, ಕಲಾಸಕ್ತರು ಸಲಹೆ ನೀಡಬೇಕು ಎಂದು ತಿಳಿಸಿದರು.
ನಮ್ಮ ಪರಂಪರೆ ನಮ್ಮ ಆಸ್ತಿ. ಮುಂದಿನ ಪೀಳಿಗೆ ಇದನ್ನು ಉಳಿಸಿಕೊಂಡು ಹೋಗಬೇಕು. ಕಲೆ ಕಲೆಗಾಗಿ ಅಲ್ಲ, ಕಲೆ ಸಮಾಜಕ್ಕಾಗಿ ಎನ್ನುವುದನ್ನು ನಾವು ಮರೆಯಬಾರದು. ವೆಂಕಟಪ್ಪ ಆರ್ಟ್ ಗ್ಯಾಲರಿ ಸರ್ಕಾರದ ಆಸ್ತಿಯಲ್ಲ, ಸಮಾಜದ ಆಸ್ತಿ. ಕಲೆ ಪ್ರಪಂಚವನ್ನು ಉಳಿಸುತ್ತದೆ. ನಮ್ಮ ಕಲ್ಪನೆ ಜ್ಞಾನಕ್ಕಿಂತ ದೊಡ್ಡದು ಎಂದು ಹಿರಿಯರು ಹೇಳಿದ್ದಾರೆ. ಕಲೆಯನ್ನು ಕಣ್ಣಲ್ಲಿ ನೋಡಿದಾಗ ಮಾತ್ರ ಅನುಭವಿಸಲು ಸಾಧ್ಯ. ನಮ್ಮ ಕಲೆ ನಮ್ಮ ಆಸ್ತಿ. ಇದು ಉಳಿಯಬೇಕು ಎಂದರೆ ಪ್ರವಾಸೋದ್ಯಮ ಬೆಳೆಯಬೇಕು” ಎಂದು ಹೇಳಿದರು.”ನಾನು ಶಾಲಾ ದಿನಗಳಲ್ಲಿ ಬೇಲೂರು, ಹಳೇಬೀಡು ಹಾಗೂ ಹೈದರಾಬಾದ್ನ ಸಾಲಾರ್ ಜಂಗ್ ಮ್ಯೂಸಿಯಂಗೆ ಹೋಗಿದ್ದೆ. ಆಗ ನಮ್ಮ ಅಧ್ಯಾಪಕರಿಗೆ, ನಮ್ಮಲ್ಲಿ ಈ ರೀತಿಯ ಮ್ಯೂಸಿಯಂ ಇಲ್ಲವೇ ಎಂದು ಕೇಳಿದ್ದೆ. ಇದಾದ ನಂತರ ನನ್ನನ್ನು ಮೂರು ತಿಂಗಳ ನಂತರ ಇಲ್ಲಿಗೆ ಕರೆದುಕೊಂಡು ಬಂದಿದ್ದರು” ಎಂದು ನೆನಪುಗಳನ್ನು ಮೆಲುಕು ಹಾಕಿದರು.
ಬೆಂಗಳೂರಿನ ಟ್ರಾಫಿಕ್ ತೊಂದರೆ ತಪ್ಪಿಸಲು ಪ್ರಯತ್ನ ಮಾಡುತ್ತಿದ್ದೇವೆ. ಒಂದು ದಿನದಲ್ಲಿ ಆಗುವ ಕೆಲಸವಲ್ಲ ಇದು. ಆದರೆ ಪ್ರಯತ್ನ ಬಿಡಬಾರದು. ಟನಲ್ ರಸ್ತೆ, ಫ್ಲೈ ಓವರ್, ಮೆಟ್ರೋ ಸೇರಿದಂತೆ ಅನೇಕ ಯೋಜನೆಗಳಿಗೆ ರೂಪುರೇಷೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಪ್ರಣವ್ ಮುಖರ್ಜಿ ಅವರು ಹಾಗೂ ಮನಮೋಹನ್ ಸಿಂಗ್ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಅವರ ಕಾರಣಕ್ಕೆ ಸಿಎಸ್ಆರ್ ನಿಧಿಯನ್ನು ಇಂತಹ ಸಮಾಜಮುಖಿ ಕೆಲಸಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ 1 ಲಕ್ಷ ಕೋಟಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಬ್ರಿಗೇಡ್ ಫೌಂಡೇಶನ್ ಅವರು ಇದೊಂದೆ ಕೆಲಸ ಮಾಡುತ್ತಿಲ್ಲ. ಬೆಂಗಳೂರಿಗೆ ಹೊಸ ವಿನ್ಯಾಸ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರ ಎಂಟತ್ತು ಕಟ್ಟಡಗಳನ್ನು ಕಟ್ಟಿರಬಹುದು. ಹೆಚ್ಚಿನ ಕಟ್ಟಡಗಳನ್ನು ಬ್ರಿಗೇಡ್, ಶೋಭಾ, ಪ್ರೆಸ್ಟೀಜ್ ಸೇರಿದಂತೆ ಅನೇಕ ಸಂಸ್ಥೆಗಳು ನಿರ್ಮಾಣ ಮಾಡಿವೆ. ನಗರಕ್ಕೆ ಹೊಸ ರೂಪ ನೀಡಿವೆ ಎಂದು ಶಿವಕುಮಾರ್ ತಿಳಿಸಿದರು.