ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರದಿಂದಲೇ ಅಗತ್ಯ ಅನುದಾನ ಒದಗಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿಯೇ ರೂ.2,611 ಕೋಟಿ ಅಂದಾಜು ಮೊತ್ತದ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರದಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2025-26 ನೇ ಸಾಲಿನ ಬಜೆಟ್ನಲ್ಲಿ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಇತರೆ ಯೋಜನೆಗಳ ಕುರಿತಂತೆ ಪ್ರಸ್ತಾಪಿಸಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಘೋಷಿಸಿದ ರೂ.5,300 ಕೋಟಿ ಅನುದಾನ ಇನ್ನೂ ಬಿಡುಗಡೆಯಾಗಿರುವುದಿಲ್ಲ. ಆದರೂ, ರಾಜ್ಯ ಸರ್ಕಾರವು ಅಗತ್ಯ ಅನುದಾನವನ್ನು ಒದಗಿಸಿ ಈ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮ ವಹಿಸುತ್ತಿದೆ.
ತರೀಕೆರೆ ಏತ ನೀರಾವರಿ ಯೋಜನೆಯಡಿ 79 ಕೆರೆಗಳನ್ನು ತುಂಬಿಸುವ ಮೂಲಕ 49,790 ಎಕರೆ ಸೂಕ್ಷ್ಮ ನೀರಾವರಿ ಸಾಮಥ್ರ್ಯ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,611 ಕೋಟಿ ರೂ. ಅಂದಾಜು ಮೊತ್ತದ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಹೊಸದುರ್ಗ, ಹೊಳಲ್ಕೆರೆ, ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲ್ಲೂಕುಗಳಲ್ಲಿನ 30 ಕೆರೆಗಳನ್ನು ತುಂಬಿಸಿ ಒಂದು ಲಕ್ಷದ ಎಪ್ಪತ್ತೇಳು ಸಾವಿರ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸಾಮಥ್ರ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ತಿಳಿಸಿದ್ದಾರೆ.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್ಗೆ ರೂ.7,550 ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೊತ್ಸಾಹಧನ ರೂ.450 ಗಳಂತೆ ಒಟ್ಟು ರೂ.138 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ, ತೊಗರಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗಟ್ಟಲು ಹಿಂದುಳಿದ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕಿಟ್ಗಳು, ಪ್ರೋತ್ಸಾಹ ಧನ ಹಾಗೂ ತಾಯಂದಿರಿಗೆ ವಾತ್ಸಲ್ಯ ಕಿಟ್ ಗಳನ್ನು ವಿತರಣೆ ಮಾಡಲಾಗುವುದು. ಹುದ್ದೆಗಳನ್ನು ಪುನರ್ ಹಂಚಿಕೆ ಮಾಡುವ ಮೂಲಕ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಎಂಸಿಹೆಚ್ ತಜ್ಞರನ್ನು ನಿಯೋಜಿಸಲಾಗುವುದು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು. ಸುಧಾರಿತ ಆರೋಗ್ಯ ಸೇವೆಯನ್ನು ಒದಗಿಸಲು ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಹಾಗೂ ಚಿತ್ರದುರ್ಗದಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
ಕೋಲಾರ, ರಾಮನಗರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಒಂಭತ್ತು ಕೋಟಿ ರೂ. ಒದಗಿಸಲಾಗಿದೆ.
ರಾಜ್ಯದಲ್ಲಿ ಪ್ರಗತಿಯಲ್ಲಿರುವ 42 ಸ್ವಯಂಚಾಲಿತ ಪರೀಕ್ಷಾ ಪಥಗಳ ನಿರ್ಮಾಣವನ್ನು ಸದರಿ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. 2025-26ನೇ ಸಾಲಿನಲ್ಲಿ ಹೊನ್ನಾವರ, ಚಾಮರಾಜನಗರ ಮತ್ತು ಚಿತ್ರದುರ್ಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥಗಳನ್ನು ನಿರ್ಮಿಸಲು ಕ್ರಮವಹಿಸಲಾಗುವುದು. ಈ ಉದ್ದೇಶಕ್ಕಾಗಿ 12 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು. ರಾಜ್ಯದಲ್ಲಿ ವಾಹನ ಸಂಚಾರವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು ದಾವಣಗೆರೆ, ಧಾರವಾಡ, ಕಲಬುರಗಿ, ಬೆಳಗಾವಿ, ಚಿತ್ರದುರ್ಗ, ಹಾವೇರಿ, ಹೊಸಪೇಟೆ, ಬಳ್ಳಾರಿ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 60 ಸ್ಥಳಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಬಜೆಟ್ನಲ್ಲಿ ತಿಳಿಸಿದ್ದಾರೆ.