ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನಾದ್ಯಂತ ಪ್ರವರ್ಗ-೨ಎ ಮೀಸಲಾತಿ ದುರ್ಬಳಕೆಯಾಗುತ್ತಿದ್ದು ಪ್ರವರ್ಗ-೨ಎ ಮೀಸಲಾತಿ ಪ್ರಮಾಣ ಪತ್ರ ಪಡೆದಿರುವ ಪ್ರಬಲ ಜಾತಿಗಳಾದ ಗಾಣಿಗ ಲಿಂಗಾಯಿತ ಮತ್ತು ಸಾದು ಲಿಂಗಾಯಿತರು ಮತ್ತು ಇತರೆ ಲಿಂಗಾಯಿತ ಉಪಜಾತಿಗಳ ವಿರುದ್ಧ ತನಿಖೆ ನಡೆಸಿ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹ ಮಾಡಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ ಪ್ರವರ್ಗ-೨ಎ ಪ್ರಮಾಣ ಪತ್ರ ಪಡೆಯುವ ವಿಚಾರದಲ್ಲಿ ಕೆಲವು ಪ್ರಬಲ ಜಾತಿಗಳು ವಾಮ ಮಾರ್ಗ ಬಳಸಿ ಪ್ರಮಾಣ ಪತ್ರಗಳನ್ನು ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿವೆ.
ಪ್ರವರ್ಗಗಳ ವ್ಯಾಪ್ತಿಗೆ ಬರದೇ ಇರುವ ಕೆಲವು ಲಿಂಗಾಯಿತ ವೀರಶೈವ ಜಾತಿಗಳ ಉಪ ಪಂಗಡಗಳಲ್ಲಿ ಇರುವ ಗಾಣಿಗ ಲಿಂಗಾಯಿತ ಮತ್ತು ಸಾದು ಲಿಂಗಾಯಿತರು ಮತ್ತು ಇತರೆ ಲಿಂಗಾಯಿತ ಉಪಜಾತಿಗಳು ಇತರೆ ಹಿಂದುಳಿದ ವರ್ಗಗಳ ಸಾಲಿಗೆ ಸೇರದ ಮತ್ತು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯವಾಗಿ ಹಾಗೂ ಎಲ್ಲಾ ಅವಕಾಶಗಳನ್ನು ಪಡೆದಿರುವ ಹತ್ತಾರು ಎಕರೆ ಭೂಮಿಗಳನ್ನು ಮತ್ತು ವಾಣಿಜ್ಯ ಬೆಳೆಗಳನ್ನು ಹೊಂದಿರುವ ಪ್ರಬಲರು ಹಿಂದೂಸಾಧರ,
ಎಣ್ಣೆ ತೆಗೆಯುವ ಕಾಯಕ ಮಾಡುವ ಗಾಣಿಗ ಜಾತಿಗಳ ಹೆಸರುಗಳನ್ನು ದುರುಪಯೋಗಪಡಿಸಿಕೊಂಡು ಈ ಪ್ರವರ್ಗ-೨ಎ ಮೀಸಲಾತಿಯನ್ನು ವಾಮ ಮಾರ್ಗದಲ್ಲಿ ಪಡೆದಿರುವುದು ಸಂವಿಧಾನದ ಆಶಯಗಳಿಗೆ ಅಪಚಾರ ಎಸೆಗುತ್ತಿರುವುದಲ್ಲ ಪ್ರಾಮಾಣಿಕವಾಗಿ ಪ್ರಯೋಜನ ಪಡೆಯಬೇಕಿದ್ದ ಹಿಂದುಳಿದ ಜಾತಿಗಳಿಗೆ ಘೋರ ಅನ್ಯಾಯ ಎಸಗಿದಂತಾಗುತ್ತಿದೆ ಎಂದು ಒಕ್ಕೂಟ ಕಿಡಿಕಾರಿದೆ.
ಹಿಂದುಳಿದ ಜಾತಿಗಳ ಪ್ರವರ್ಗ-೨ಎ ಫಲಾನುಭವಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ವಾಮ ಮಾರ್ಗದಲ್ಲಿ ಸರ್ಕಾರಕ್ಕೆ ವಂಚಿಸಿ 2ಎ ಪ್ರಮಾಣ ಪತ್ರ ಪಡೆಯುತ್ತಿರುವ ಮತ್ತು ಈಗಾಗಲೇ ಪಡೆದಿರುವವರ ಜಾತಿಗಳ ವಿರುದ್ಧ ತನಿಖೆ ನಡೆಸಬೇಕು. ತಂದೆ ತಾಯಿ, ಅಜ್ಜಂದಿರುಗಳ ಜಾತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಪ್ರಮಾದ ಎಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಬಿ.ಟಿ.ಜಗದೀಶ್, ವಕೀಲ ಸುದರ್ಶನ್, ಆನಂದಕುಮಾರ್, ಅಶೋಕ್‌ನಾಯ್ಡು, ರಹಮತ್‌ವುಲ್ಲಾ, ಇಂತಿಯಾಜ್, ಶ್ರೀನಿವಾಸ್, ಜೀವನ್, ಕೃಷ್ಣಮೂರ್ತಿ, ಪ್ರಾಣೇಶ್, ವಿನಾಯಕ ಇನ್ನು ಮುಂತಾದವರು ಇದ್ದರು.

