ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹತ್ತಾರು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮೂವರು ಕಿಡಿಗೇಡಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಿಯಮ್ಮ ದೇವಸ್ಥಾನದ ಬೀದಿ ಬದಿ ಅಂಗಡಿ ಸೇರಿದಂತೆ ಹಲವು ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ಆರೋಪಿಗಳಾದ ಡಿ.ಜೆ.ಹಳ್ಳಿ ಸುತ್ತಮುತ್ತಲಿನ ನಿವಾಸಿಗಳಾದ ಮಕ್ಸೂದ್ ಅಹಮದ್, ಇಜಾರ್ ಪಾಷಾ ಹಾಗೂ ಹಮಿತ್ ತಬ್ರೇಜ್ ಬಂಧಿತರು.
ಏನಿದು ಘಟನೆ:
ಕಳೆದ ತಿಂಗಳ ಜುಲೈ 28ರ ಬೆಳಗಿನ ಜಾವ ಕುಡಿದ ಅಮಲಿನಲ್ಲಿ ಉದ್ದೇಶ ಪೂರ್ವಕವಾಗಿ 10 ದ್ವಿಚಕ್ರ ವಾಹನಗಳು, 7 ಸೈಕಲ್ ಹಾಗೂ ಅಂಗಡಿಗೆ ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳ ಕೃತ್ಯದಿಂದಾಗಿ ದುರ್ಘಟನೆಯಲ್ಲಿ ವಾಹನಗಳಿಗೆಲ್ಲ ಹಾನಿಯಾಗಿದ್ದವು. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರನ್ನು ಬಂಧಿಸಿದ್ಧಾರೆ.
ಈ ಹಿಂದೆ ಹಲಸೂರಿನ ಬಜಾರ್ ಸ್ಟ್ರೀಟ್ನಲ್ಲಿ ಆರೋಪಿ ಮಕ್ಸೂದ್ ಅಹಮದ್ ತರಕಾರಿ ವ್ಯಾಪಾರ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಡಿ.ಜೆ. ಹಳ್ಳಿಗೆ ಮನೆ ಬದಲಿಸಿದ್ದ. ಹಲಸೂರಿನಲ್ಲಿ ವಾಸವಿರುವಾಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಪಹಾದ್ ಹಾಗೂ ಸರ್ಪುದ್ದೀನ್ ಎಂಬುವರು ಕ್ಷುಲ್ಲಕ ಕಾರಣಕ್ಕಾಗಿ ಆರೋಪಿ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದರು.
ಅವಮಾನಕ್ಕೆ ಒಳಗಾಗಿದ್ದ ಮಕ್ಸೂದ್ ದ್ವೇಷಿಸಿದ್ದ. ಹಲಸೂರಿನಲ್ಲಿ ತಮ್ಮದೇ ಪ್ರಭಾವವಿರುವುದಾಗಿ ಸಂದೇಶ ಸಾರಲು ಇನ್ನಿಬ್ಬರನ್ನು ಒಗ್ಗೂಡಿಸಿ ದುಷ್ಕೃತವೆಸಗಿದ್ದು ಸದ್ಯ ಮೂವರು ಆರೋಪಿಗಳ ಮೇಲೆ ರೌಡಿಶೀಟ್ ತೆರೆಯಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

