ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೋಟ್ಯಂತರ ಮೌಲ್ಯದ ನಗ ನಾಣ್ಯ ದೋಚಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಜಿ ಕಾರ್ಪೋರೇಟರ್ ಮನೆಯಲ್ಲಿ ಆರೋಪಿಗಳಾದ ರಘು, ಮಿಥುನ್ ಹಾಗೂ ಜೈದೀಪ್ ಕಳವು ಮಾಡಿ ಪರಾರಿಯಾಗಿದ್ದರು.
ಜಯನಗರ 5ನೇ ಬ್ಲಾಕ್‌ನ ಮಾಜಿ ಕಾರ್ಪೋರೇಟರ್ ಟಿ.ಎಸ್. ವಸಂತ್ ಕುಮಾರ್ ಭವಾನಿ ಅವರ ಮನೆಯಲ್ಲಿ ಜುಲೈ 20ರಂದು ಕಳ್ಳತನ ಮಾಡಿದ್ದ ಆರೋಪಿಗಳು ಬರೋಬ್ಬರಿ 78.50 ಲಕ್ಷ ರೂ. ಮೌಲ್ಯದ 1.85 ಕೆ.ಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಸ್ಕೂಟಿ ಮೇಲೆ ಬಂದು ಮನೆಯೊಳಗೆ ಹೋಗುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಡಿಲೆವರಿ ಎಕ್ಸಿಕ್ಯುಟಿವ್‌ಗಳ ಸೋಗಿನಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಯಾರೂ ಇರದ ಮನೆಗಳಲ್ಲಿ ಕ್ಷಣ ಮಾತ್ರದಲ್ಲಿ ಬೀಗ ಮುರಿದು ಕಳ್ಳತನ ಮಾಡಿ ಸಿಕ್ಕ ಸಿಕ್ಕ ವಸ್ತು ದೋಚುತ್ತಿದ್ದರು.
ಕಳೆದ ಜುಲೈ 20ರಂದು ಸಂಜೆ 4:30ಕ್ಕೆ ಮಗನನ್ನು ಏರ್‌ಪೋರ್ಟ್‌ಗೆ ಬಿಟ್ಟು ಬರಲು ವಸಂತ್ ಕುಮಾರ್ ಅವರು ತೆರಳಿದ್ದರು. ಆದರೆ ರಾತ್ರಿ 8 ಗಂಟೆಗೆ ವಾಪಸ್ ಬಂದು ನೋಡಿದಾಗ ಮನೆಯ ಲಾಕ್ ಒಡೆದು 1.03 ಕೋಟಿ ಮೌಲ್ಯದ ಚಿನ್ನಾಭರಣ, ರೋಲೆಕ್ಸ್ ವಾಚ್, ನಗದು ದೋಚಿರುವುದು ಪತ್ತೆ ಆಗಿತ್ತು.
ಮನೆಯಲ್ಲಿ ಯಾರು ಇಲ್ಲದ ಸಮಯಕ್ಕೆ ಹೊಂಚು ಹಾಕಿ ಕುಳಿತಿದ್ದ ಆರೋಪಿಗಳು, ಮೂರುವರೆ ಗಂಟೆಯೊಳಗೆ ಕೃತ್ಯ ಮುಗಿಸಿ ಎಸ್ಕೇಪ್ ಆಗಿದ್ದರು.
ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತುರಹಳ್ಳಿ ಅರಣ್ಯ ವಲಯದಲ್ಲಿದ್ದ ಆರೋಪಿಗಳನ್ನು ಚಿನ್ನಾಭರಣಗಳ ಸಮೇತ ಬಂಧಿಸಿರುವುದಾಗಿ ತಿಳಿಸಿದರು.

