ಚಂದ್ರವಳ್ಳಿ ನ್ಯೂಸ್, ಬಾಗಲಕೋಟೆ:
ಕಬ್ಬು ತುಂಬಿದ್ದ ಟ್ರ್ಯಾಕ್ಟರ್ಗಳಿಗೆ ಬೆಂಕಿ ಇಟ್ಟು ಕಲ್ಲು ತೂರಾಟ ಮಾಡಿದ್ದ ಪ್ರಕರಣಕ್ಕೆ ಸಂಬಧಿಸಿದಂತೆ ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ.
ಮುಧೋಳ ನಗರದಲ್ಲಿ ನಿರಂತರ ಹದಿನೈದು ದಿನಗಳ ಕಾಲ ನಡೆದ ಹೋರಾಟ ನವೆಂಬರ್ 13 ರಂದು ವಿಕೋಪಕ್ಕೆ ತಿರುಗಿತ್ತು. ಮುಧೋಳ ನಗರದಲ್ಲಿ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ಮಾಡಿದ ರೈತರು ಸಂಜೆ ಗೋದಾವರಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲು ಹೊರಟಿದ್ದರು.
ಈ ವೇಳೆ ನಡೆಯಬಾರದ ಘಟನೆ ನಡೆದು ಹೋಗಿತ್ತು. ಉದ್ರಿಕ್ತರು ಸಂಗಾನಟ್ಟಿ ಬಳಿ ಎರಡು ಟ್ರೇಲರ್ನ ಟ್ರ್ಯಾಕ್ಟರ್ ತಳ್ಳಿ ಬೆಂಕಿ ಹಚ್ಚಿದ್ದರು. ನಂತರ ಗೋದಾವರಿ ಕಾರ್ಖಾನೆ ಆವರಣದಲ್ಲಿನ 20ಕ್ಕೂ ಅಧಿಕ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಐದು ಬೈಕ್ ಬೆಂಕಿಗಾಹುತಿಯಾಗಿದ್ದವು.
ಇನ್ನು ಘಟನೆ ವೇಳೆ ಕಲ್ಲು ತೂರಾಟ ನಡೆದಿತ್ತು. ಇದೇ ವೇಳೆ ಎಎಸ್ಪಿ ಮಹಾಂತೇಶ್ವರ ಜಿದ್ದಿ ಅವರ ಕಾಲು ಮುರಿದಿತ್ತು. ಈ ಹಿನ್ನೆಲೆ ಘಟನೆಗೆ ಸಂಬಂಧಿಸಿದಂತೆ ಮಹಾಲಿಂಗಪುರ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ. ಅದರಲ್ಲೂ ಕಾರ್ಖಾನೆ ಪರ ಬಂದ ಐವರ ವಿರುದ್ಧ ಪೊಲೀಸ್ ಅಧಿಕಾರಿಗಳ ಕೊಲೆ ಯತ್ನ ಎಂದು ಎಫ್ಐಆರ್ ದಾಖಲಾಗಿದೆ.
ಪೊಲೀಸ್ ವಶಕ್ಕೆ ಐವರು-
ಎಫ್ಐಆರ್ 1ರಲ್ಲಿ ಸಮೀರವಾಡಿ ಕಾರ್ಖಾನೆ ಪರವಾಗಿ ಬಂದಿದ್ದ 5 ಜನರು ಪೊಲೀಸ್ ಅಧಿಕಾರಿಗಳ ಕೊಲೆಗೆ ಯತ್ನಿಸಿರುವುದಾಗಿ ಮಹಾಲಿಂಗಪುರ ಪಿಎಸ್ಐ ಕಿರಣ ಸತ್ತಿಗೇರಿ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಕರ್ತವ್ಯನಿರತ ಎಎಸ್ಪಿ ಮಹಾಂತೇಶ್ವರ ಜಿದ್ದಿ, ಬನಹಟ್ಟಿ ಸಿಪಿಐ ಹೆಚ್ ಆರ್ ಪಾಟಿಲ್, ತೇರದಾಳ ಪಿಎಸ್ ಶಿವಾನಂದ ಸಿಂಗನ್ನವರ ಕರ್ತವ್ಯ ನಿರ್ವಹಣೆ ವೇಳೆ ತಳ್ಳಾಟ, ನೂಕಾಟ ಮಾಡಿ ಕಲ್ಲು ತೂರಾಟ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದಾಗಿ ಪ್ರಭು ತಂಬೂರಿ, ಯಂಕಪ್ಪ ಕೇದಾರಿ, ವಿಠಲ ಹೊಸಮನಿ, ದಸ್ತಗಿರಿ ಸಾಬ್ ನದಾಫ್, ಶಿವಲಿಂಗ ಶಿಂಧೆ ಸೇರಿದಂತೆ 150 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾರ್ಖಾನೆ ಬೆಂಬಲಕ್ಕೆ ಬಂದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕಲ್ಲು ತೂರಾಟ, ಪೊಲೀಸರಿಗೆ ಗಾಯ, ಪೊಲೀಸ್ ವಾಹನ ಜಖಂಗೊಳಿಸಿದ ಆರೋಪ ಹಿನ್ನೆಲೆ ಕಾರ್ಖಾನೆ ಪರವಾಗಿದ್ದ ಗುಂಪಿನ 5 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.
ಎಫ್ಐಆರ್- 2ರಲ್ಲಿ ಹೋರಾಟದ ಮುಂದಾಳತ್ವ ವಹಿಸಿದ್ದ ರೈತರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಸುಭಾಷ್ ಶಿರಬೂರ, ಈರಪ್ಪ ಹಂಚಿನಾಳ, ಮುತ್ತಪ್ಪ ಕೋಮಾರ, ಹನುಮಂತ ಗೌಡ ಪಾಟಿಲ್, ದುಂಡಪ್ಪ ಯರಗಟ್ಟಿ, ಬಸಪ್ಪ ಸಂಗಣ್ಣವರ, ಸುರೇಶ್ ಚಿಂಚಲಿ, ಸದಾಶಿವ ಸಕರೆಡ್ಡಿ, ರಾಚಪ್ಪ ಕಲ್ಲೊಳ್ಳಿ, ಗಂಗಾಧರ ಮೇಟಿ, ಮಹೇಶ್ ಗೌಡ ಪಾಟಿಲ್, ಹನುಮಂತ ನಬಾಬ್ ಸೇರಿದಂತೆ ಸೇರಿದಂತೆ 17 ಜನರ ವಿರುದ್ಧ ತೇರದಾಳ ಪಿಎಸ್ಐ ಶಿವಾನಂದ ಸಿಂಗನ್ನವರ ದೂರಿನ ಮೇರೆಗೆ ಸಾರ್ವಜನಿಕ ಆಸ್ತಿ ಹಾನಿಯಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಎಫ್ಐಆರ್- 3ರಲ್ಲಿ ಕಾರ್ಖಾನೆ ಸಿಬ್ಬಂದಿಯಿಂದ ಒಂದು ಎಫ್ಐಆರ್ ಆಗಿದೆ. 100 ರಿಂದ150 ಅಪರಿಚಿತರ ವಿರುದ್ಧ ಕಾರ್ಖಾನೆ ಸಿಬ್ಬಂದಿ ಮಲ್ಲಿಕಾರ್ಜುನ ಗುಗ್ಗರಿ ಎಂಬುವರಿಂದ ನೀಡಿದ ದೂರು ಆಧರಿಸಿ 3ನೇ ಎಫ್ಐಆರ್ ದಾಖಲಿಸಲಾಗಿದೆ. ಕಾರ್ಖಾನೆ ಆವರಣದೊಳಗೆ ನುಗ್ಗಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಬೈಕ್ಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಕಿಡಿಗೇಡಿಗಳ ಕೃತ್ಯ ಎಂದು ಸಕ್ಕರೆ ಸಚಿವರು, ಬಾಗಲಕೋಟೆ ಉಸ್ತುವಾರಿ ಸಚಿವರು ಹೇಳಿದ್ದಾರೆ. ಹಾಗಾದರೆ ರೈತ ಮುಖಂಡರ ಮೇಲೆ ಏಕೆ ಎಫ್ಐಆರ್ ಮಾಡಿದರು. ರೈತರು ಕಿಡಿಗೇಡಿಗಳಾ ಎಂದು ರೈತರು ಗರಂ ಆಗಿದ್ದಾರೆ.

