ಚಂದ್ರವಳ್ಳಿ ನ್ಯೂಸ್, ಬಾಳೆಹೊನ್ನೂರು:
ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರು ತಾಲೂಕಿನ ಮೂರುಗದ್ದೆ ಮತ್ತು ಜಲದುರ್ಗದ ನಡುವೆ ಜಯಪುರ ಬಳಿ ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿ ಬಿದ್ದು 30 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬೆಂಗಳೂರು ಡಿಪೋಗೆ ಸೇರಿದ ಕೆಎಸ್ಆರ್ ಟಿಸಿ ಬಸ್‌ನಲ್ಲಿ 45 ಪ್ರಯಾಣಿಕರಿದ್ದರು ಎನ್ನಲಾಗಿದೆ. ಜಯಪುರ ಸಮೀಪದ ಪುಟ್ಟಪ್ಪ ಪೂಜಾರಿ ಎಂಬವರ ಮನೆಯ ಮೇಲೆ ಸಾರಿಗೆ ಬಸ್ ಉರುಳಿ ಬಿದ್ದಿದ್ದು ವಾಸದ ಮನೆಗೂ ಕೂಡ ಹಾನಿ ಆಗಿದೆ. ಗಾಯಗೊಂಡ 10 ಮಂದಿಯನ್ನು ಜಯಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಲಕ ವೆಂಕಪ್ಪ ಸೇರಿದಂತೆ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಬಸ್ ಡಿಕ್ಕಿ ಹೊಡೆದ ಮನೆಯ ನಿವಾಸಿ ಶಾಂತಾ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯ ನಿವಾಸಿಗಳು ಸಹಾಯ ಮಾಡಿದರು. ಬಸ್ ತುಂಬಾ ಹಳೆಯದಾಗಿದ್ದು, ಉತ್ತಮವಾಗಿ ನಿರ್ವಹಿಸದೇ ಇರುವುದರಿಂದ ಅಪಘಾತಕ್ಕೆ ಕಾರಣ ಇರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.