ಮದ್ಯ ಸೇವಿಸಿ ಶಾಲಾ ವಾಹನ ಓಡಿಸುತ್ತಿದ್ದ 36 ಚಾಲಕರು ಪತ್ತೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರ ಪಶ್ಚಿಮ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಮದ್ಯ ಸೇವಿಸಿ ಶಾಲಾ ವಾಹನ ಓಡಿಸುವ 36 ಚಾಲಕರನ್ನು ಪತ್ತೆ ಹಚ್ಚಿದ್ಧಾರೆ.
ಬೆಂಗಳೂರಿನ ಹಲಸೂರು ಗೇಟ್, ಅಶೋಕನಗರ, ಸದಾಶಿವನಗರ, ಬ್ಯಾಟರಾಯನಪುರ, ಮಾಗಡಿ ರೋಡ್ ಸೇರಿದಂತೆ 15 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶುಕ್ರವಾರ ಬೆಳಗ್ಗೆ 7.30 ರಿಂದ 9.30ರ ವರೆಗೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 5,881 ಶಾಲಾ ಬಸ್ಗಳ ಚಾಲಕರನ್ನು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಲಾಯಿತು.
ಈ ವೇಳೆ ಕುಡಿದು ವಾಹನ ಚಾಲನೆ ಮಾಡುತ್ತಿದ್ದ 36 ಮಂದಿ ಚಾಲಕರು ಪೊಲೀಸರ ತಪಾಸಣೆ ವೇಳೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ಧು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಕುಡಿದು ವಾಹನ ಚಾಲನೆ ಮಾಡುತ್ತಿದ್ದ 36 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಾಹನ ಪರವಾನಗಿ (ಡಿಎಲ್)ರದ್ದು ಕೋರಿ ಆರ್ಟಿಒಗೆ ಶಿಫಾರಸು ಮಾಡಿದ್ದಾರೆ. ಅಲ್ಲದೆ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದ ಚಾಲಕರು ಕೆಲಸ ಮಾಡುತ್ತಿದ್ದ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಶಾಲಾ ವಾಹನ ಚಾಲಕರಿಗೆ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್ ಮಾಡಲಾಯಿತು.
ಹಲವು ಚಾಲಕರು ಕುಡಿದು ವಾಹನ ಚಾಲನೆ ಮಾಡಿರುವುದು ಪತ್ತೆಯಾಗಿದೆ. ಅಂಥವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಲ್ಲದೆ ಡಿಎಲ್ ರದ್ದುಪಡಿಸಲು ಆರ್ಟಿಓಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

