ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸೈಬರ್ ವಂಚಕರು 378 ಕೋಟಿ ರೂ ಲೂಟಿ ಮಾಡಿರುವ ಘಟನೆ ಬೆಂಗಳೂರಿನ
ಬೆಳ್ಳಂದೂರಿನಲ್ಲಿರುವ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಕಂಪನಿ ನೆಬಿಲೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ನಡೆದಿದೆ.
ಸೈಬರ್ ವಂಚಕರು ಕಂಪನಿಯ ವ್ಯಾಲೆಟ್ ಹ್ಯಾಕ್ ಮಾಡಿ 378 ಕೋಟಿ ರೂ (44 ಮಿಲಿಯನ್ ಅಮೆರಿಕನ್ ಡಾಲರ್) ಲೂಟಿ ಮಾಡಿದ್ದಾರೆ.
ಈ ಕುರಿತು ಕಂಪನಿಯ ಸಾರ್ವಜನಿಕ ನೀತಿ ಹಾಗೂ ಸರ್ಕಾರಿ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷ ಹರ್ದೀಪ್ ಸಿಂಗ್ ನೀಡಿರುವ ದೂರಿನ ಆಧಾರದಲ್ಲಿ ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ:
ಇಷ್ಟು ದೊಡ್ಡ ಮೊತ್ತ ವಂಚನೆಯಾಗಿರುವುದು ಬೆಳಕಿಗೆ ಬಂದ ತಕ್ಷಣ ಕಂಪನಿ ಆಂತರಿಕ ತನಿಖೆ ನಡೆಸಿದೆ. ಕಂಪನಿ ಉದ್ಯೋಗಿ ರಾಹುಲ್ ಅಗರ್ವಾಲ್ ಎಂಬವರಿಗೆ ಕೆಲಸ ಮಾಡಲು ಕಂಪನಿ ಲ್ಯಾಪ್ಟಾಪ್ ನೀಡಿತ್ತು. ಸೈಬರ್ ಕಳ್ಳರು ಈ ಲ್ಯಾಪ್ಟಾಪ್ನ ವ್ಯಾಲೆಟ್ ಹ್ಯಾಕ್ ಮಾಡಿದ್ದಾರೆ.
ಈ ವೇಳೆ, ರಾಹುಲ್ ಅಗರ್ವಾಲ್ ಅವರು ಕಂಪನಿ ಲ್ಯಾಪ್ಟಾಪ್ ಅನ್ನು ಮತ್ತೊಂದು ಪಾರ್ಟ್ಟೈಂ ಉದ್ಯೋಗಕ್ಕೆ ಬಳಸಿರುವುದು ಗೊತ್ತಾಗಿದೆ. ಕಳೆದ ಒಂದು ವರ್ಷದಿಂದ ಪಾರ್ಟ್ಟೈಮ್ ಉದ್ಯೋಗದ ಮೂಲಕ ಅಗರ್ವಾಲ್ 15 ಲಕ್ಷ ರೂ ಸಂಪಾದಿಸಿರುವುದೂ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಈತನೇ ಬೇರೆ ವ್ಯಕ್ತಿಗಳೊಂದಿಗೆ ಸೇರಿ ಈ ವಂಚನೆ ಎಸಗಿರುವ ಸಾಧ್ಯತೆ ಇದೆ ಎಂದು ಕಂಪನಿ ದೂರಿನಲ್ಲಿ ತಿಳಿಸಿದೆ.
ಉದ್ಯೋಗಿ ವಶಕ್ಕೆ: “ನೆಬಿಲೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕಳೆದ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ರಾಹುಲ್ ಅಗರ್ವಾಲ್, ಆತನ ಲ್ಯಾಪ್ಟಾಪ್ನಿಂದ ಕಂಪನಿಯ ಕ್ರಿಪ್ಟೋ ಕರೆನ್ಸಿ ವರ್ಗಾವಣೆಯಾಗಿರುವ ಕಾರಣ ಆತನನ್ನು ವಶಕ್ಕೆ ಪಡೆಯಲಾಗಿದೆ. ಸೈಬರ್ ವಂಚನೆ ಪ್ರಕರಣದಲ್ಲಿ ಆತನ ಕೈವಾಡವಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ನೀಡಿದರು.

