ಮೊರಾರ್ಜಿ ವಸತಿ ಶಾಲೆಯ 39 ಮಕ್ಕಳು ಅಸ್ವಸ್ಥ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಕ್ಕೋಡಿ ಜಿಲ್ಲೆಯ ಹಿರೇಕೋಡಿಯ ಮೊರಾರ್ಜಿ ವಸತಿ ಶಾಲೆಯ 39 ಮಕ್ಕಳು ಕಲುಷಿತ ಆಹಾರ ಸೇವನೆಯ ಪರಿಣಾಮದಿಂದ ಅಸ್ವಸ್ಥಗೊಂಡಿರುವ ವರದಿ ಕಳವಳ ಉಂಟು ಮಾಡಿದೆ. ಬಡ ಮಕ್ಕಳ ಶಿಕ್ಷಣ, ಆರೋಗ್ಯದ ಜವಾಬ್ದಾರಿ ಹೊತ್ತ ಮೊರಾರ್ಜಿ ವಸತಿ ಶಾಲೆಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಮತ್ತೆ ಅದೇ ರೀತಿಯ ಘಟನೆ ಸಂಭವಿಸಿರುವುದು ಜವಾಬ್ದಾರಿ ಹೊತ್ತ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯತನದ ನಿರ್ವಹಣೆಯನ್ನು ಸಾಬೀತು ಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದೂರಿದ್ದಾರೆ.
ಮಕ್ಕಳಿಗೆ ಸುರಕ್ಷಿತ ಆಹಾರ ಒದಗಿಸುವಲ್ಲಿ ಅಧಿಕಾರಿಗಳು ಉಡಾಫೆತನ ತೋರುತ್ತಿದ್ದಾರೆ, ರಾಜ್ಯದ ಅನೇಕ ಸರ್ಕಾರಿ ವಸತಿ ಶಾಲೆಗಳಲ್ಲಿ ಈ ರೀತಿಯ ಆಘಾತಕಾರಿ ಘಟನೆಗಳು ಸಂಭವಿಸುತ್ತಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿರುವುದು ಅತ್ಯಂತ ಆತಂಕಕಾರಿ ನಡೆಯಾಗಿದೆ.
ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಅಸ್ವಸ್ಥ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಿ, ಮಕ್ಕಳಿಗೆ ಹಾಗೂ ಪೋಷಕರಿಗೆ ಆತ್ಮಸ್ಥೈರ್ಯ ತುಂಬಲಿ. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಮತ್ತೆ ಇಂಥಾ ಘಟನೆ ಮರುಕಳಿಸದಂತೆ ಹೆಚ್ಚಿನ ಮುಂಜಾಗರೂಕತಾ ಕ್ರಮ ವಹಿಸಲಿ ಎಂದು ವಿಜಯೇಂದ್ರ ಆಗ್ರಹ ಮಾಡಿದ್ದಾರೆ.

