ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದ 40% ಕಮಿಷನ್ ಆರೋಪ ಚುನಾವಣೆಗಾಗಿ ಸೃಷ್ಟಿ ಮಾಡಿದ್ದ ಸುಳ್ಳು, ಅಪಪ್ರಚಾರ ಎಂದು ಹಲವಾರು ಕಾಂಗ್ರೆಸ್ ನಾಯಕರು ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ 40% ಕಮಿಷನ್ ಆರೋಪಗಳು ಶುದ್ಧ ಸುಳ್ಳೆಂದು ಲೋಕಾಯುಕ್ತ ತನಿಖಾ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲೂ ಸಾಬೀತಾಗಿದೆ.
ಇಷ್ಟಾದರೂ ಮತ್ತೊಮ್ಮೆ ಎಸ್ಐಟಿ ರಚನೆ ಮಾಡುತ್ತಿರುವ ಉದ್ದೇಶವೇನು? ಇದು ದ್ವೇಷ ರಾಜಕಾರಣವಲ್ಲದೇ ಮತ್ತೇನು? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಲೋಕಾಯುಕ್ತ ವರದಿ ಮೇಲೆ ನಂಬಿಕೆ ಇಲ್ಲ ಅಂದ ಮೇಲೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ನೀಡಿರುವ ಕ್ಲೀನ್ ಚಿಟ್ ಕೂಡ ಪ್ರಶ್ನಾರ್ಹ ಅಲ್ಲವೇ? ಈಗ ಗುತ್ತಿಗೆದಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವ ಶೇ.60%ರಷ್ಟು ಕಮಿಷನ್ ಆರೋಪಕ್ಕೂ ಎಸ್ಐಟಿ ರಚನೆ ಮಾಡುತ್ತೀರಾ? ಎಂದು ವಿಪಕ್ಷ ನಾಯಕರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಸುಳ್ಳು, ಅಪಪ್ರಚಾರ, ಕಪೋಲಕಲ್ಪಿತ ಆರೋಪಗಳು, ಈಡೇರಿಸಲಾಗದ ಭರವಸೆಗಳ ಆಧಾರದ ಮೇಲೆ ಕನ್ನಡಿಗರಿಗೆ ವಂಚನೆ ಮಾಡಿ ಅಧಿಕಾರಕ್ಕೆ ಬಂದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನ, ಕನ್ನಡಿಗರು ಗಂಟು ಮೂಟೆ ಕಟ್ಟಿ ಶಾಶ್ವತವಾಗಿ ಮನೆಗೆ ಕಳುಹಿಸುವ ದಿನ ಬಹಳ ದೂರವಿಲ್ಲ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.